ಜಗತ್ತಿನಲ್ಲೆ ಪ್ರಪ್ರಥಮವಾಗಿ ಪ್ಲಾಸ್ಟಿಕ್ ನೋಟುಗಳನ್ನು ತಯಾರಿಸಿ, ಬಳಸಿದ ಕೀರ್ತಿ ಆಷ್ಟ್ರೇಲಿಯಕ್ಕೆ ಸಲ್ಲುತ್ತದೆ. ಪ್ಲಾಸ್ಟಿಕ್ ನೋಟುಗಳು ಪಾಲಿಮರ್‌ನಿಂದ ತಯಾರಿಸ್ಲಟ್ಟಿದ್ದು ಇವುಗಳಿಂದ ಖೋಟಾನೋಟುಗಳನ್ನು ತಯಾರಿಸುವದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲದೆ ಇವುಗಳನ್ನು ಶುಭ್ರವಾಗಿಟ್ಟುಕೊಳ್ಳಬಹುದು ಮತ್ತು ಸರಾಗವಾಗಿ ತೊಳೆಯಬಹುದು. ಈ ನೋಟುಗಳನ್ನು ಆಷ್ಟ್ರೇಲಿಯ ಪ್ರಪ್ರಥಮವಾಗಿ ೧೯೮೮ರಲ್ಲಿ ಚಲಾವಣೆಗೆ ತಂದಿತು.
ಇಲ್ಲಿನ ಮೂಲನಿವಾಸಿಗಳು ಯುರೋಪಿನ ಜನರ ಆಗಮನಕ್ಕಿಂತ ಮೊದಲು ಯಾವದೇತರಹದ ಹಣವನ್ನು ಉಪಯೋಗಿಸುತ್ತಿರಲಿಲ್ಲ ಎನಿಸುತ್ತದೆ. ಆದರೆ ಯುರೋಪಿನ ವಸಾಹತುಗಾರರು ಇಲ್ಲಿಗೆ ಮೊದಲು ಬಂದಾಗ ಸ್ವಲ್ಪ ಮಟ್ಟಿಗೆ ಬ್ರಿಟೀಷ್ ನಗದನ್ನು ಉಪಯೋಗಿಸುತ್ತಿದ್ದರೂ ಹೆಚ್ಚಾಗಿ ತಮ್ಮ ತಮ್ಮಲಿಯ ವಸ್ತುಗಳ ವಿನಿಮಯದ ಮೂಲಕ ವ್ಯಾಪಾರಮಾಡುತ್ತಿದ್ದರು. ಅದರಲ್ಲೂ ರಮ್‌ನಂತೂ ಹೆಚ್ಚಾಗಿ ಹಣದ ರೂಪದಲ್ಲಿ ಬಳಸುತ್ತಿದ್ದರು. ಬಹುಶಃ ರಮ್‌ನ್ನು ಬಹಳ ದಿನ ಶೇಖರಿಸಿಡಬಹುದು ಮತ್ತು ಅದರ ಬೆಲೆ ಯಾವಾಗಲೂ ಕಡಿಮೆ ಆಗುವದಿಲ್ಲ ಎನ್ನುವದೇ ಇದಕ್ಕೆ ಕಾರಣವಾಗಿರಬಹುದು.
೧೮೧೮ರಲ್ಲಿ ಬ್ಯಾಂಕ ಆಫ್ ನ್ಯುಸೌಥ ವೇಲ್ಸ್ ’ಪೋಲಿಸ್ ಫ಼ಂಡ್ ನೋಟು’ಗಳನ್ನು ಮುದ್ರಿಸಿದ ಮೇಲೆ ಜನರು ಅವುಗಳನ್ನೇ ಉಪಯೋಗಿಸ ತೊಡಗಿದರು. ಇವೇ ಆಷ್ಟ್ರೇಲಿಯಾದ ಮೊದಲ ಅಧಿಕೃತ ನೋಟುಗಳು.
೧೯೦೧ರಲ್ಲಿ ಆಷ್ಟ್ರೇಲಿಯ ಒಂದು ಸ್ವತಂತ್ರ ದೇಶವೆಂದು ಘೋಷಣೆಯಾದಾಗ ಅದು ತನ್ನದೇ ಆದಂತಹ ನಗದನ್ನು ಹೊಂದಬೇಕಾಯಿತು. ಅದರಂತೆ ೧೯೧೩ರಲ್ಲಿ ಆಷ್ಟ್ರೇಲಿಯಾ ಹಳೆಯ ಬ್ರಿಟೀಶ ಪದ್ದತಿಯಂತೆ ತನ್ನ ಪ್ರಥಮ ’ಆಷ್ಟ್ರೇಲಿಯನ್ ಪೌಂಡ್’ನೋಟುಗಳನ್ನು ಹೊರತಂದಿತು. (೧ಪೌಂಡ್=೨೦ಶೀಲಿಂಗ್,೧ಶೀಲಿಂಗ್=೧೨ಪೆನ್ಸ್).
೧೯೬೬ರ ತನಕ ಆಷ್ಟ್ರೇಲಿಯ ಈ ಬ್ರಿಟೀಶ ಪದ್ದತಿಯ ಪೌಂಡ್ ನಗದನ್ನೇ ಅನುಸರಿಸುತ್ತಿದ್ದು, ಆ ವರ್ಷದ ಫ಼ೆಬ್ರುವರಿ ೧೪ರಂದು ದಶಮಾನ ಪದ್ದತಿಗೆ ಬದಲಾಯಿಸಿಕೊಂಡು ಡಾಲರ ಎಂದು ಕರೆಯಲು ಪ್ರಾರಂಭಿಸಿತು.
೧೯೮೩ಕ್ಕಿಂತ ಮೊದಲು ಆಷ್ಟ್ರೇಲಿಯದ ಡಾಲರ್ ಬೆಲೆಯನ್ನು ಸ್ಥಿರವಾಗಿಟ್ಟು ಅಂತರಾಷ್ಟ್ರೀಯ ವ್ಯವಹಾರವನ್ನು ಮಾಡಲಾಗುತ್ತಿತ್ತು. ಆದರೆ ೧೯೮೩ರ ಡಿಸೆಂಬರ್೧೨ ರಂದು ಅಂತರಾಷ್ಟ್ರೀಯ ಮಾರುಕಟ್ಟೆಯ ಆಗುಹೋಗುಗಳಿಗೆ ತಕ್ಕಂತೆ ಬದಲಾಯಿಸುವ ವ್ಯವಸ್ಥೆಗೆ ಮಾರ್ಪಡಿಸಲಾಯಿತು.
ಆಷ್ಟ್ರೇಲಿಯದ ಈಗಿನ ನೋಟು/ನಾಣ್ಯಗಳು.
ನೋಟುಗಳು
- ಡಾಲರ ೫ ನೋಟು-----ಇದರಲ್ಲಿ ಎಲಿಜಬೆಥ್ ರಾಣಿ ಮತ್ತು ಕ್ಯಾನ್ಬೆರಾದ ಸಂಸತ ಭವನ ಇವುಗಳನ್ನು ತೋರಿಸಲಾಗಿದೆ.
- ಡಾಲರ ೧೦ರ ನೋಟು-----ಇದರಲ್ಲಿ ಸಾಹಿತಿ/ಕವಿ ಬೆಂಜೊ ಪ್ಯಾಟೆರ್ಸನ್ ಮತ್ತು ಡೇಮ್ ಮೆರಿ ಗಿಲ್ಮೋರ್ ಅವರನ್ನು ತೋರಿಸಲಾಗಿದೆ ಮತ್ತು ಅವರ ಕೃತಿಗಳ ಕೆಲಭಾಗಗಳನ್ನು ಸಣ್ಣದಾಗಿ ಮುದ್ರಿಸಲಾಗಿದೆ.
- ಡಾಲರ ೨೦ರನೋಟು-----ಇದರಲ್ಲಿ ರೆವೆರೆಂಡ ಜಾನ್ ಫಾಯ್ನ್ (ಇವರು ಜಗತ್ತಿನಲ್ಲಿ ಮೊದಲ ಬಾರಿಗೆ ಹ್ಯಾಲಿಕಾಪ್ಟರ್ ಮೂಲಕ ವೈದ್ಯಕೀಯ ತುರ್ತು ಸೇವೆ ಸಲ್ಲಿಸಬಹುದು ಎಂದು ತೋರಿಸಿಕೊಟ್ಟು ಅಂತಹ ಸಂಸ್ಥೆಯನ್ನು ಹುಟ್ಟುಹಾಕಿದರು.)ಮತ್ತು ಇನ್ನೊಂದು ನೋಟಿನಲ್ಲಿ ಮೆರಿ ರೈಬೆ ( ಇವರು ಅಪರಾದಿ ವಲಸೆಗಾರರಾಗಿ ೧೭೯೨ರಲ್ಲಿ ಆಷ್ಟ್ರೇಲಿಯಾಕೆ ಬಂದು ಮುಂದೆ ಅತಿ ದೊಡ್ಡ ಹಡಗು ಸಾಗಣಿಕಾ ಉದ್ದಿಮೆದಾರರಾದರು)ಇವರನ್ನು ತೋರಿಸಲಾಗಿದೆ.
- ಡಾಲರ ೫೦ರ ನೋಟು -----ಇದರಲ್ಲಿ ಮೂಲನಿವಾಸಿ ಬರಹಗಾರ ಸಂಶೋಧಕ ಡೆವಿಡ್ ಊನೈಪನ್ ಮತ್ತು ಆಷ್ಟ್ರೇಲಿಯದ ಪ್ರಥಮ ಸಂಸತ ಸದಸ್ಯೆ ಏಡಿತ ಕೋವನ್ ಅವರನ್ನು ತೋರಿಸಲಾಗಿದೆ.
- ಡಾಲರ ೧೦೦ರ ನೋಟು-----ಇದರಲ್ಲಿ ಡೆಮ್ ನೆಲ್ಲಿ ಮೆಲ್ಬಾ ಮತ್ತು ಪ್ರಸಿದ್ಧ ಸೈನಿಕ ಪಡೆ ಮುಖ್ಯಸ್ಥ ಸರ್ ಜಾನ್ ಮೋನಾಶ ಇವರನ್ನು ತೋರಿಸಲಾಗಿದೆ.
ನಾಣ್ಯಗಳು
- ೫ಸೆಂಟ್ ನಾಣ್ಯ-----ಇದರಲ್ಲಿ ಜಗತ್ತಿನ ಮೊಟ್ಟೆ ಇಡುವ ಎರಡು ಸಸ್ತನಿಗಳಲ್ಲಿ ಒಂದಾದ ಎಚಿಡ್ನಾ ಪ್ರಾಣಿಯ ಚಿತ್ರವನ್ನು ಟಂಕಿಸಲಾಗಿದೆ.
- ೧೦ ಸೆಂಟ್ ನಾಣ್ಯ-----ಇದರಲ್ಲಿ ಆಷ್ಟ್ರೇಲಿಯಾದ ಪೂರ್ವ ಕರಾವಳಿಯ ಕಾಡುಗಳಲ್ಲಿ ಕಾಣಸಿಗುವ ಗಂಡು ಲೈರ್‌ಬರ್ಡ್ ಪಕ್ಷಿಯನ್ನು ತೋರಿಸಲಾಗಿದೆ.
- ೨೦ ಸೆಂಟ್ ನಾಣ್ಯ-----ಇದರಲ್ಲಿ ಇನ್ನೊಂದು ಮೊಟ್ಟೆಇಡುವ ಸಸ್ತನಿ ಪ್ಲೈಟಿಪಸ್‌ನ್ನು ಮುದ್ರಿಸಲಾಗಿದೆ.
- ೫೦ ಸೆಂಟ್ ನಾಣ್ಯ-----ಆಷ್ಟ್ರೇಲಿಯಾದ ರಾಷ್ಟ್ರ ಚಿನ್ಹೆಯನ್ನು ಬೇರೆ ಬೇರೆ ತರನಾಗಿ ಬೇರೆ-ಬೇರೆ ತರಹದ ೫೦ ಸೆಂಟ್ ನಾಣ್ಯಗಳಲ್ಲಿ ಮುದ್ರಿಸಲಾಗಿದೆ. ಆಷ್ಟ್ರೇಲಿಯಾದ ರಾಷ್ಟ್ರ ಚಿನ್ಹೆಯ ವಿಶೇಷತೆಯಂದರೆ ಇದರ ನಡುವೆ ಆರು ರಾಜ್ಯಗಳ ಚಿನ್ಹೆಗಳನ್ನು ಹೊಂದಿದ ಫಲಕವಿದ್ದು ಈ ಫಲಕದ ಅಕ್ಕ-ಪಕ್ಕ ಕಾಂಗರೂ ಮತ್ತು ಎಮೂ ಪಕ್ಷಿಯನ್ನು ನಿಲ್ಲಿಸಲಾಗಿದೆ.
- ಡಾಲರ ೧ ನಾಣ್ಯ-----ಇದನ್ನು ೧೯೮೪ರಲ್ಲಿ ಡಾಲರ ೧ರ ನೋಟಿನ ಬದಲಾಗಿ ಚಲಾವಣೆಯಲ್ಲಿ ತರಲಾಯಿತು ಮತ್ತು ಇದರಲ್ಲಿ ಐದು ಕಾಂಗರೂಗಳನ್ನು ಟಂಕಿಸಲಾಗಿದೆ.
- ಡಾಲರ್ ೨ರನಾಣ್ಯ-----ಇದನ್ನು ೧೯೮೮ರಲ್ಲಿ ೨ ಡಾಲರ ನೋಟಿನ ಬದಲಾಗಿ ಚಲಾವಣೆಯಲ್ಲಿ ತರಲಾಯಿತು ಮತ್ತು ಇದರಲ್ಲಿ ಆಷ್ಟ್ರೇಲಿಯಾದ ಮೂಲನಿವಾಸಿ ಹಿರಿಯನೊಬ್ಬನ ಚಿತ್ರವನ್ನು ಮುದ್ರಿಸಲಾಗಿದೆ.