Sunday, 18 August 2013

ಆಸ್ಟೇಲಿಯಾದ ಇತಿಹಾಸ

ಆಸ್ಟೇಲಿಯಾ ಜಗತ್ತಿನಲ್ಲಿಯೇ ಅತೀ ದೊಡ್ಡದಾದಂತಹ ಒಂದು ಖಂಡದೇಶ.  ಆಸ್ಟ್ರೇಲಿಯಾ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮೂಡುವುದು ಇದು ಒಂದು ಬಿಳಿಯರ ದೇಶ ಎಂದು.  ಹಾಗೆಯೇ ಆಸ್ಟ್ರೇಲಿಯಾದ ಇತಿಹಾಸ ಎಂದ ತಕ್ಷಣ ಇಲ್ಲಿ ಬ್ರಿಟಿಷರು ತಮ್ಮ ವಸಾಹತನ್ನು ಸ್ಥಾಪಿಸಿದ ನಂತರ ಎಂದೇ ಭಾವಿಸುತ್ತಾರೆ.  ಆದರೆ ನಿಜವಾಗಿಯೂ ಆಸ್ಟ್ರೇಲಿಯಾದ ಇತಿಹಾಸದಲ್ಲಿ ಇಲ್ಲಿನ ಮೂಲನಿವಾಸಿಗಳು ಎಂದು ಕರೆಯಲ್ಪಡುವ ಒಂದು ಕಪ್ಪು ಜನಾಂಗದವರ, ಬ್ರಿಟೀಶ್ ಮತ್ತು ಇತರ ಯುರೋಪಿನ ವಲಸೆಗಾರರ ಅಷ್ಟೆ ಏಕೆ ಇತ್ತೀಚಿನ ದಶಕಗಳಲ್ಲಿ ವಲಸೆ ಬಂದ ಇತರ ಇನ್ನುಳಿದ ದೇಶಗಳ ಜನರ ಕಥೆಗಳು ಅಡಗಿವೆ.

ಆಸ್ಟೇಲಿಯಾದ ಮೂಲನಿವಾಸಿಗಳು

        ಆಸ್ಟೇಲಿಯಾದ ಮೂಲನಿವಾಸಿಗಳು ಈಗಿನ ಇಂಡೋನೇಷಿಯಾ ಎಂದು ಕರೆಯಲ್ಪಡುವ ಆಗ್ನೇಯ ಏಶಿಯಾ ಭಾಗದಿಂದ ೪೦,೦೦೦ - ೬೦,೦೦೦ ವರ್ಷಗಳ ಹಿಂದೆಯೇ ಇಲ್ಲಿಗೆ ವಲಸೆ ಬಂದರೆಂದು ಭಾವಿಸಲಾಗಿದೆ.  ಈ ಜನರು ಬ್ರಿಟಿಷರು ಬರುವುದಕ್ಕಿಂತ ಪೂರ್ವದಲ್ಲಿ ನಾಗರೀಕತೆಯ ಗಂಧಗಾಳಿಯನ್ನೇ ಅರಿತಿರಲಿಲ್ಲ. ಇವರಿಗೆ ಕೃಷಿ ಮತ್ತು ಹೈನುಗಾರಿಕೆ ಬಗ್ಗೆ ತಿಳಿದಿರಲಿಲ್ಲ. ಆದರೆ ಇವರ ಜೀವನಶೈಲಿ ತುಂಬಾ ಸರಳವಾಗಿತ್ತು ಮತ್ತು ಬೇಟೆಯಾಡಿ, ಮೀನು ಹಿಡಿದು ಆಹಾರವನ್ನು ಪಡೆದುಕೊಳ್ಳುತ್ತಿದ್ದರು. ಇಂಥ ದೊಡ್ಡ ದೇಶದ ತುಂಬ ಹರಡಿಕೊಂಡಿದ್ದರಿಂದ ವಿವಿಧ ಸಣ್ಣ ಸಣ್ಣ ಗುಂಪುಗಳಾಗಿ ವಾಸಿಸುತ್ತಿದ್ದು ತಮ್ಮ ತಮ್ಮದೇ ಆದಂತಹ ೨೫೦ ಕ್ಕೂ ಅಧಿಕ ಬೇರೆ-ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದರು.   ಅಷ್ಟೇ ಅಲ್ಲದೆ ಇವರು ತಮ್ಮದೇ ಆದಂತಹ ಸಂಸ್ಕೃತಿ, ಸಂಪ್ರದಾಯಗಳನ್ನು ಬೆಳೆಸಿಕೊಂಡಿದ್ದರು.  ಅವರ ನಂಬುಗೆಯ ಪ್ರಕಾರ ಡ್ರೀಮ್ ಟೈಮ್ ಎನ್ನುವ ಕಾಲದಲ್ಲಿ ಅತಿಮಾನುಷ ಶಕ್ತಿ ಜನರನ್ನು, ಭೂಮಿಯನ್ನು ಹಾಗೂ ಸೂರ್ಯನನ್ನು ರೂಪಿಸಿದೆ ಎನ್ನುವುದು.  ಈ ಡ್ರೀಮ್ ಟೈಮ್ ಎನ್ನುವ ಕಾಲದಲ್ಲಿ ಇಡೀ ಜಗತ್ತಿನ ನಿರ್ಮಾಣ ಹೇಗೆ ಆಯಿತು ಎನ್ನುವ ಹಲವಾರು ತರಹದ ಜಾನಪದ ಕಥೆಗಳು ಈ ಜನರ ವಿವಿಧ ಗುಂಪುಗಳಲ್ಲಿ ನಮಗೆ ಸಿಗುತ್ತವೆ.  ಮತ್ತು ಈ ಕಥೆ ಅಥವಾ ನಂಬಿಕೆಗಳು ಆ ಗುಂಪುಗಳ ಸಂಪ್ರದಾಯ, ಕಲೆ ಮತ್ತು ಭಾಷೆಗಳನ್ನು ರೂಪಿಸಿವೆ.

ಈ ಜನರು ತಮ್ಮದೆ ಆದಂತಹ ಜಾನಪದ ನೃತ್ಯಗಳನ್ನು , ಹಾಡುಗಳನ್ನು ಹೊಂದಿದ್ದಾರೆ. ಇವರು ಬಳಸುವ ಡಿಡ್ಜೆರಿಡೊ ಎನ್ನವ ಕೊಳವೆಯಂತಹ(ನಮ್ಮ ಸನಾದಿಯನ್ನು ಹೋಲುವ) ವಾದ್ಯಕ್ಕೆ ೧೦೦೦ ವರ್ಷಗಳ ಇತಿಹಾಸವಿದೆ ಎಂದು ಅಂದಾಜಿಸಲಾಗಿದೆ.
ಈಗ ಆಸ್ಟ್ರೇಲಿಯಾದ ಗುರುತಿನ ಚಿನ್ಹೆ ಎಂದೆನಿಸಿರುವ ಬೂಮರಾಂಗ್ ಎನ್ನವ ಆಯುಧ-ಉಪಕರಣವನ್ನು ಈ ಮೂಲನಿವಾಸಿಗಳು ತಲ-ತಲಾಂತರದಿಂದ ಉಪಯೋಗಿಸುತ್ತಿದ್ದಾರೆ. ಕಟ್ಟಿಗೆಯಿಂದ ಕೆತ್ತಿ ಲಂಬಕೋನಾಕೃತಿಯಲ್ಲಿ ಮಾಡಲ್ಪಡುತ್ತಿದ್ದ ಈ ಉಪಕರಣವನ್ನು ಇವರು ಬೇಟೆಯಾಡಲು ಮತ್ತು ಮನರಂಜನೆಗಾಗಿ ಆಟವಾಡಲು ಉಪಯೋಗಿಸುತ್ತಿದ್ದರು. ಈ ಬೂಮರಾಂಗ್‌ನ್ನು ಸ್ವಸ್ಥಾನಕ್ಕೆ ಮರಳುವಂತೆ ಎಸೆಯುವದು ಒಂದು ವಿಶಿಷ್ಟ ಕಲೆಯೆಂದೆ ಅನಿಸಿಕೊಂಡಿದೆ. ಬೂಮರಾಂಗ್‌ನ್ನು ಈಗಂತೂ ವಿವಿಧ ತರನಾಗಿ ತಯಾರಿಸಲಾಗುತ್ತಿದ್ದು ಬೂಮರಾಂಗ ಎಸೆತವನ್ನು ಮತ್ತು ಅಂತರಾಷ್ಟ್ರೀಯ ಆಟವನ್ನಾಗಿ ಆಡಲಾಗುತ್ತಿದೆ.
ಈ ನೆಲಕ್ಕೆ ಯುರೋಪಿಯನ್ನರು ಬರುವತನಕ ಒಂದುತರಹದ ನಿರ್ಲಿಪ್ತ ಜೀವನ ನಡೆಸುತ್ತಿದ್ದ ಈ ಮೂಲನಿವಾಸಿಗಳು ಅವರ ಆಗಮನದ ನಂತರ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಾಗರಿಕತೆಯನ್ನು ಅರಿಯದ ಈ ಸಮುದಾಯಕ್ಕೆ ಒತ್ತಾಯದ ಮೇರೆಗೆ ಆಧುನಿಕ ಜೀವನಕ್ರಮವನ್ನು ಹೇರಲಾಯಿತು. ಇದರಿಂದ ತಮ್ಮದೇ ನಾಡಿನಲ್ಲಿ ಪರಕೀಯತೆಯನ್ನು ಇವರು ಅನುಭವಿಸುವದರೊಂದಿಗೆ ಇವರೆಲ್ಲರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರಿತು. ಈ   ಮೂಲನಿವಾಸಿಗಳನ್ನು ಆಧುನಿಕತೆಗೆ ಒಳಪಡಿಸುವ ಭರದಲ್ಲಿ ಬ್ರಿಟೀಶರು ಇವರ ಮಕ್ಕಳನ್ನು ಇವರಿಂದ ಒತ್ತಾಯಪೂರ್ವಕವಾಗಿ ಬೇರ್ಪಡಿಸಿ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕೊಡಿಸಿದರು. ’ಸ್ಟೋ
ನ್ ಜನರೇಶನ್’ಎಂದು ಕರೆಯಲ್ಪಟ್ಟ ಈ ಮೂಲನಿವಾಸಿಗಳ ಸಂತತಿ ಅನುಭವಿಸಿದ ಯಾತನೆ ಯಾರೂ ಮರೆಯಲಾಗದಂತಹುದು.
,
ಆಸ್ಟ್ರೇಲಿಯಾಕ್ಕೆ ಯೂರೋಪಿಯನ್ನರ ಆಗಮನ:

೧೬೦೬ ರಲ್ಲಿ ಡಚ್ ಸಂಶೋಧಕನಾದ ವಿಲಿಯಮ್ ಜಾನ್ಸ್‌ಜೂನ್ ಆಸ್ಟ್ರೇಲಿಯಾದ ಈಗಿನ ಕ್ವೀನ್ಸ್‌ಲ್ಯಾಂಡ್ ರಾಜ್ಯಕ್ಕೆ ಭೇಟಿ ನೀಡಿದನು.  ಇವನೇ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಪ್ರಥಮ ಯೂರೋಪಿಯನ್.  ನಂತರದ ವರ್ಷದಲ್ಲಿ ಸ್ಪ್ಯಾನಿಷ ಸಂಶೋಧಕ ಲೂಯಿಸ್ ವೇಜ್ ಡೆ ಟೊರಸ್ ಎಂಬುವವನು ಆಸ್ಟ್ರೇಲಿಯ ಮತ್ತು  ಪಾಪುವಾ ನ್ಯೂಗಿನಿಯಾಗಳ ನಡುವೆ ತನ್ನ  ದೋಣಿ ಮೂಲಕ ಹಾದು ಹೋದನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ  ಯುರೋಪಿಯನ್ನರು ಈ ದೇಶವನ್ನು ’ನ್ಯೂಹಾಲಂಡ್’ಎಂದು ಕರೆಯುತ್ತಿದ್ದರು. ನಂತರದ ವರ್ಷಗಳಲ್ಲಿ ಬಹಳಷ್ಟು ಯೂರೋಪಿಯನ್ನರು ಭೇಟಿ ನೀಡಿದರೂ ಅವರಿಗೆ ಇಲ್ಲಿ ನೆಲೆಸಲು ಯಾವುದೇ ಆರ್ಥಿಕ ಅನುಕೂಲತೆಗಳು ಕಾಣಿಸಲಿಲ್ಲ.  ಏಕೆಂದರೆ ಇದು ಒಣಭೂಮಿ ನೆಲೆಸಲು ಯೋಗ್ಯವಾದ ಸ್ಥಳವಲ್ಲ ಎಂದು ಅವರು ಭಾವಿಸಿದರು.  ೧೬೪೨ ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಬಲ್ ಟಾಸ್ಮನ್ ಎಂಬುವವನು ಟಾಸ್ಮೇನಿಯಾಕ್ಕೆ ಬಂದನು. (ಅವನ ಹೆಸರಿನಿಂದಲೇ ಅದು ಟಾಸ್ಮೇನಿಯಾ ಎಂದು ಕರೆಯಲ್ಪಟ್ಟಿದೆ.) ೧೬೮೮ರಲ್ಲಿ, ವಿಲಿಯಮ್ ಡೆಂಪಿಯರ್ ಎನ್ನುವವನು ಆಸ್ಟ್ರೇಲಿಯಾಕ್ಕೆ ಪಾದರ್ಪಣೆ ಮಾಡಿದ ಪ್ರಥಮ ಇಂಗ್ಲೀಷಿಗನಾಗಿದ್ದಾನೆ. ನಂತರ ಹಲವಾರು ಜನರು ಇಲ್ಲಿಗೆ ನಾವೆಗಳ ಮೂಲಕ ಬಂದು ಹೋದರು. ಆದರೆ ಬ್ರಿಟೀಶರು ಈ ಹೊಸ ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ೧೭೭೦ ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್‌ನನ್ನು ಇಲ್ಲಿಗೆ ಕಳುಹಿಸಿದರು. ಜೇಮ್ಸ್ ಕುಕ್ ಈಗಿನ ನ್ಯೂಸೌಥ ವೇಲ್ಸ್‌ದ ಬಾಟನಿ-ಬೆ ಎಂಬಲ್ಲಿ ಬಂದಿಳಿದು ಅಲ್ಲಿಯ ಪ್ರದೇಶವನ್ನು ಅಭ್ಯಸಿಸಿ ಹಾಗೆ ಹೋಗ ಬೇಕಾದರೆ ಆಸ್ಟ್ರೆಲಿಯಾದ ಪೂರ್ವ ಕರಾವಳಿಯಗುಂಟ ಪ್ರಯಾಣಿಸಿದನು. ಆ ಸಮಯದಲ್ಲಿ ಅವನು ತಯಾರಿಸಿದ ಆಸ್ಟ್ರೇಲಿಯಾದ ನಕ್ಷೆ, ಇಂಗ್ಲೆಂಡ್‌ನಿಂದ ಬಂದು-ಹೋಗುವ ಸಮುದ್ರ ದಾರಿಯ ನಕ್ಷೆ ಬಹಳ ಸರಿಯಾಗಿದ್ದು, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಆ ಕಾಲದಲ್ಲಿ ಅವನು ಮಾಡಿದ ಈ ಸಾಧನೆ ಅವನ ಸಮುದ್ರ ಯಾನದ ಪರಿಣತಿಗೆ ಸಾಕ್ಷಿ ಆಗಿದೆ. ಅವನು ಪೂರ್ವಕರಾವಳಿಯಲ್ಲಿಯ ಅನೇಕ ಭೂಭಾಗಗಳನ್ನು ಅವುಗಳ ಅಕ್ಷಾಂಶ-ರೇಖಾಂಶಗಳೊಂದಿಗೆ ಗುರುತಿಸಿ ಅವುಗಳಿಗೆ ತನ್ನದೇ ಆದಂತಹ ಹೆಸರುಗಳನ್ನು ಕೊಟ್ಟಿದ್ದಾನೆ. ಆ ಸ್ಥಳಗಳನ್ನು ಇನ್ನೂ ಸಹಿತ ಅವೇ ಹೆಸರಿನಿಂದ ಕರೆಯಲಾಗುತ್ತದೆ. ಹೀಗೆ ಸಂಪೂರ್ಣ ಮಾಹಿತಿಯೊಂದಿಗೆ ಮರಳಿದ ಕ್ಯಾಪ್ಟನ್ ಕುಕ್‌ನ ಶಿಫ಼ಾರಸಿನಂತೆ ಬ್ರಿಟಿಶರು ಈ ಹೊಸ ಭೂಮಿಯಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಲು ಮುಂದಾದರು.

2 comments: