Friday, 11 October 2013

ರಾಷ್ಟ್ರೀಯ ಲಾಂಛನ- ಕೋಟ್ ಆಫ್ ಆರ್ಮ್ಸ್


ಕೋಟ್ ಆಫ್ ಆರ್ಮ್ಸ್ ಅನ್ನುವದು ಆಷ್ಟ್ರೇಲಿಯದ ರಾಷ್ಟ್ರೀಯ ಲಾಂಛನವಾಗಿದ್ದು ಇದರಲ್ಲಿ ಒಂದು ಫಲಕ ಕೇಂದ್ರ ಭಾಗದಲ್ಲಿದ್ದು ಆ ಫಲಕವನ್ನು ಕಾಂಗರೂ ಮತ್ತು ಎಮು ಪಕ್ಷಿ ಅಕ್ಕ-ಪಕ್ಕದಲ್ಲಿ  ಹಿಡಿದುಕೊಂಡಿರುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಈ ಪದಕದ ಕೆಳಭಾಗದಲ್ಲಿ  ಆಷ್ಟ್ರೇಲಿಯದ ರಾಷ್ಟ್ರೀಯ ಹೂವಿನ ಗಿಡ ಎಂದೆನಿಸಿರುವ - ಬಂಗಾರ ಬಣ್ಣದ ವಾಟ್ಟಲ್‌ನ ಹೂ-ಎಲೆ-ಟೊಂಗೆಗಳು ಹರಡಿಕೊಂಡಿವೆ.


ನಡುವಿನ ಪದಕದಲ್ಲಿ ಎಲ್ಲ ಆರೂ ರಾಜ್ಯಗಳನ್ನು ಪ್ರತಿನಿಧಿಸುವ ಆರು ಲಾಂಛನಗಳು ಈ ರೀತಿಯಾಗಿವೆ.
ಮೇಲಿನ ಸಾಲಿನಲ್ಲಿ
ಕೆಂಪುಬಣ್ಣದ ಸಂತ ಜಾರ್ಜ್ ಕ್ರಾಸ್-ನ್ಯೂಸೌಥವೇಲ್ಸ್
ನೀಲಿ ಬಣ್ಣದ ಪಟ್ಟಿಯಲ್ಲಿರುವ ಕಿರೀಟ ಮತ್ತು ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ-ವಿಕ್ಟೋರಿಯಾ
ತಿಳಿನೀಲಿ ಬಣ್ಣದ ಮಾಲ್ತೀಸ್ ಕ್ರಾಸ್‌ನಲ್ಲಿ ಕಿರೀಟ-ಕ್ವೀನ್ಸ್‌ಲ್ಯಾಂಡ್
ಕೆಳಗಿನ ಸಾಲಿನಲ್ಲಿ
ಆಷ್ಟ್ರೇಲಿಯದ ಬಿಳಿ ಪಟ್ಟಿಯ ಕಾಗೆ-ಸೌತ್ ಆಷ್ಟ್ರೇಲಿಯಾ
ಕಪ್ಪು ಹಂಸ-ವೆಸ್ಟರ್ನ್ ಆಷ್ಟ್ರೇಲಿಯಾ
ಕೆಂಪು ಸಿಂಹ- ತಾಸ್ಮೇನಿಯಾ
ಇವಲ್ಲದೆ ಈ ಫಲಕದ ಮೇಲೆ ಕಾಮನ್‌ವೆಲ್ಥ ನಕ್ಷತ್ರವಿದ್ದು ಈ ನಕ್ಷತ್ರ ಏಳು ಮೂಲೆಬಿಂದುಗಳಿಂದಾಗಿದ್ದು ಆಷ್ಟ್ರೇಲಿಯಾದ ಆರು ರಾಜ್ಯಗಳೊಂದಿಗೆ ಇನ್ನುಳಿದ ದ್ವೀಪ ಪ್ರಾಂತಗಳನ್ನು ಪ್ರತಿನಿಧಿಸುತ್ತದೆ.

ಈ ಲಾಂಛನದಲ್ಲಿರುವ ಕೆಂಪು ಕಾಂಗರು ಮತ್ತು ಎಮು ಪಕ್ಷಿಗಳು ಆಷ್ಟ್ರೇಲಿಯದಲ್ಲಿ ಮಾತ್ರ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ ಹಿಮ್ಮುಖವಾಗಿ ನಡೆಯಲು ಬರುವದಿಲ್ಲ ಎಂಬ (ಮುಂದೆ ಮುಖ ಮಾಡಿ ಮಾತ್ರ ನಡೆಯುವದು ಅಭಿವೃದ್ಧಿಯ ಸಂಕೇತ)ಕಾರಣದಿಂದ ಇವುಗಳನ್ನು ಲಾಂಛನದಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಈ ಕಾರಣ ಅಷ್ಟು ಸರಿಯಲ್ಲ. ಇವು ಹಿಮ್ಮುಖವಾಗಿಯೂ ಒಂದೊಂದೆ ಹೆಜ್ಜೆಯಂತೆ ಸ್ವಲ್ಪ ಮಾತ್ರ (ದನಕರುಗಳಂತೆ) ನಡೆಯಬಲ್ಲವು.
 


ಕೋಟ್ ಆಫ್ ಆರ್ಮ್ಸ್‌ನ್ನು ೧೯೦೮ ರ ಮೇ ೭ರಂದು ಅಧಿಕೃತವಾಗಿ ರಾಷ್ಟ್ರೀಯ ಲಾಂಛನವಾಗಿ ಘೋಷಿಸಲಾಯಿತು. ಇದನ್ನು ಎಲ್ಲ ಸರಕಾರಿ ಸ್ವಾಮ್ಯದ ಕಚೇರಿಗಳಲ್ಲಿ, ಕಾಗದ ಪತ್ರಗಳಲ್ಲಿ, ಪಾಸ್‌ಪೋರ್ಟಗಳ ಮೇಲೆ, ಕೆಲ ಸೈನಿಕ ಪಡೆಗಳ ಬ್ಯಾಡ್ಜ್ ಗಳ ಮೇಲೆ ಅಧಿಕೃತವಾಗಿ ಬಳಸಲಾಗುತ್ತದೆ.

No comments:

Post a Comment