Sunday, 17 November 2013

ರಾಷ್ಟ್ರೀಯ ಹೂವಿನ ಗಿಡ- ಬಂಗಾರ ಬಣ್ಣದ ವಾಟ್ಟಲ್



ಅಕೇಸಿಯಾ ಪೈಕ್ನಂತಾ (Acacia pycnantha)ಎಂದು ವೈಜ್ಞಾನಿಕ ಹೆಸರು ಹೊತ್ತಿರುವ ಬಂಗಾರ ಬಣ್ಣದ ವಾಟ್ಟಲ್ ಅಧಿಕೃತವಾಗಿ  ಆಸ್ಟ್ರೇಲಿಯದ ರಾಷ್ಟ್ರೀಯ ಹೂವಿನ ಗಿಡ ಎಂದು ಅಂಗೀಕರಿಸಲ್ಪಟ್ಟಿದೆ. ವಾಟ್ಟಲ್ ಗಿಡಗಳು ಜಗತ್ತಿನ ಹಲವೆಡೆ ಬೆಳೆದರೂ ಆಷ್ಟ್ರೇಲಿಯಾದಲ್ಲಿ ಸಿಗುವಷ್ಟು ಬೇರೆ ಬೇರೆ ಪ್ರಭೇದಗಳು ಬೇರೆಲ್ಲೂ ಇಲ್ಲ ಅನಿಸುತ್ತದೆ. ದಿನಕ್ಕೆ ಮೂರು ತರನಾದ ವಾಟ್ಟಲ್ ಗಿಡಗಳಂತೆ ವರ್ಷಪೂರ್ತಿ ನೆಟ್ಟರೂ ಇಲ್ಲಿ ಸಿಗುವ ಎಲ್ಲಾ ತರನಾದ ವಾಟ್ಟಲ್‌ಗಳನ್ನು ನೆಡುವದಾಗುವದಿಲ್ಲ ಎನ್ನುವ ಮಾತು ಆಸ್ಟ್ರೇಲಿಯದಲ್ಲಿ ಚಲಾವಣೆಯಲ್ಲಿದೆ
. 

ಬಂಗಾರ ಬಣ್ಣದ ವಾಟ್ಟಲ್ ಗಿಡ.  ಕನ್ನಡದಲ್ಲಿ ಇದನ್ನು ಬಹುಶಃ ಸಂಕೇಶ್ವರ ಗಿಡ ಎಂದು ಕರೆಯುತ್ತಾರೆ. 
 



ಬಂಗಾರ ಬಣ್ಣದ ವಾಟ್ಟಲ್ ಗಿಡದಲ್ಲಿರುವ ಹಸಿರೆಲೆಗಳು ಮತ್ತು ಮೊಗ್ಗಿನಂತಹ ಹಳದಿ ಹೂವುಗಳು ತಮ್ಮ ಅತಿ ವಿಶಿಷ್ಟ ಬಣ್ಣಗಳಿಂದ ಕಣ್ಮನ ಸೆಳೆಯುತ್ತವೆ. ಈ ಹೂವಿನ ಗಿಡವನ್ನು ಆಸ್ಟ್ರೇಲಿಯದ ರಾಷ್ಟ್ರೀಯ ಲಾಂಛನ- ಕೋಟ್ ಆಫ್ ಆರ್ಮ್ಸ್‌ದಲ್ಲಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಬಂಗಾರ ಬಣ್ಣದ ವಾಟ್ಟಲ್ ಇರುವ ಅಂಚೆ ಚೀಟಿಯನ್ನೂ ಸರಕಾರ ಬಿಡುಗಡೆ ಮಾಡಿದೆ.
 
 
ಬಂಗಾರ ಬಣ್ಣದ ವಾಟ್ಟಲ್ ಅನ್ನು ಸಂಕೇತಿಸುವ ಹಸಿರು ಹಾಗೂ ಹಳದಿ ಬಣ್ಣ ಗಳನ್ನು ಹೊಂದಿರುವ ಸಮವಸ್ತ್ರಗಳನ್ನು ಆಷ್ಟ್ರೇಲಿಯಾ ಕ್ರಿಕೆಟ್ ತಂಡವಲ್ಲದೇ ಇನ್ನೂ ಹಲವು ಒಲಂಪಿಕ್ ತಂಡಗಳು ಹೊಂದಿವೆ.
 
ಆಷ್ಟ್ರೇಲಿಯಾದ ಹಲವು ಊರುಗಳಲ್ಲಿವ ಓಣಿಗಳ ಹೆಸರುಗಳನ್ನು  ವಾಟ್ಟಲ್ ಸ್ಟ್ರೀಟ್ ಅಂತ ಕರೆದು ಆಯಾ ಊರುಗಳ  ಸ್ಥಳೀಯ ಆಡಳಿತ ಈ ರಾಷ್ಟ್ರೀಯ ಹೂವಿನ ಗಿಡಕ್ಕೆ ಗೌರವ ಸೂಚಿಸಿವೆ.

 
ಕ್ವೀನ್ಸ್ ಲ್ಯಾಂಡ್ ರಾಜ್ಯದ ಮಕಾಯ್ ಊರಿನಲ್ಲಿರುವ ಓಣಿಯ ನಾಮಪಕಲಕ
 

೧೯೮೮ ಸೆಪ್ಟೆಂಬರ್ ೧ರಂದು ಬಂಗಾರ ಬಣ್ಣದ ವಾಟ್ಟಲ್‌ನ್ನು ರಾಷ್ಟ್ರೀಯ ಹೂವಿನ ಗಿಡ ಎಂದು ಘೋಷಿಸಿದ ಸವಿ ನೆನಪಿಗಾಗಿ ಆ ದಿನವನ್ನು ವಾಟ್ಟಲ್ ದಿನವೆಂದು ಆಚರಿಸಲಾಗುತ್ತದೆ.
 


Saturday, 26 October 2013

ರಾಷ್ಟ್ರ ಗೀತೆ- ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಅಡ್ವಾನ್ಸ್ ಆಸ್ಟ್ರೇಲಿಯ ಫೇರ್ ಇದು ಆಸ್ಟ್ರೇಲಿಯಾದ ರಾಷ್ಟ್ರ ಗೀತೆ. ಇದು ಪೀಟರ್ ಡೋಡ್ಸ್ ಮ್ಯಾಕ್ ಕೊರ್ಮಿಕ್ ಎನ್ನುವವರಿಂದ ರಚಿಸಲ್ಪಟ್ಟಿದ್ದು ಇದನ್ನು ೧೯೮೪ ರಲ್ಲಿ ಆಸ್ಟ್ರೇಲಿಯಾದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾಯಿತು.

ಅಡ್ವಾನ್ಸ್ ಆಸ್ಟ್ರೇಲಿಯ ಫೇರ್‌ನ್ನು ಪೀಟರ್ ಡೋಡ್ಸ್ ಮ್ಯಾಕ್ ಕೊರ್ಮಿಕ್ ಅವರು ನಿಖರವಾಗಿ ಯಾವಾಗ ಬರೆದಿದ್ದು ಎಂದು ಗೊತ್ತಿಲ್ಲವಾದರೂ ಅದನ್ನು ಮೊದಲು ಹಾಡಿದ್ದು ೧೮೭೮ರಲ್ಲಿ ಸಿಡ್ನಿಯ ಒಂದು ಕಾರ್ಯಕ್ರಮದಲ್ಲಿ. ಅವಾಗಿನಿಂದ ಎಲ್ಲ ಆಸಿಗಳ ಮನಸೂರೆಗೊಂಡ ಈ ಗೀತೆಗೆ ರಾಷ್ಟ್ರ ಗೀತೆ ಎಂದು ಕರೆಯಿಸಿಕೊಳ್ಳಲು ಬರೊಬ್ಬರಿ ೧೦೬ ವರ್ಷ ಕಾಯಬೇಕಾಯಿತು.

 ಇದಕ್ಕಿಂತ ಮೊದಲು ’ಗಾಡ್ ಸೇವ್ ಕ್ವೀನ್’ ಇದು ಆಸ್ಟ್ರೇಲಿಯಾದ ರಾಷ್ಟ್ರ ಗೀತೆಯಾಗಿತ್ತು. ಹಾಗೆ ನೋಡಿದರೆ ’ಗಾಡ್ ಸೇವ್ ಕ್ವೀನ್’ ನಿಜವಾಗಿಯೂ ಬ್ರಿಟೀಶರ ರಾಷ್ಟ್ರ ಗೀತೆ. ಇದನ್ನು ಬ್ರಿಟೀಶರಷ್ಟೇ ಅಲ್ಲದೇ ಅವರ ಆಳ್ವಿಕೆಯಲ್ಲಿದ್ದ ಬಹಳ ರಾಷ್ಟ್ರಗಳು ಬ್ರಿಟೀಶ ಅಧಿಪತ್ಯದಿಂದ ಹೊರಬಂದರೂ ತಮ್ಮ ರಾಷ್ಟ್ರ ಗೀತೆಯಾಗಿ ಇನ್ನೂ ಉಪಯೋಗಿಸುತ್ತಿವೆ. ನ್ಯೂಜಿಲ್ಯಾಂಡ್, ಕೆನಡಾ, ಜಮೈಕಾ, ಬಾರ್ಬಡೋಸ್, ರೊಡೇಸಿಯಾ ಈ ದೇಶಗಳು ’ಗಾಡ್ ಸೇವ್ ಕ್ವೀನ್’ನ್ನೇ ರಾಷ್ಟ್ರ ಗೀತೆಯಾಗಿ ಒಪ್ಪಿಕೊಂಡಂತಹ ಇನ್ನುಳಿದ ದೇಶಗಳು.
ಆಸ್ಟ್ರೇಲಿಯಾ ೧೯೦೦ ರಲ್ಲಿ ಬ್ರಿಟಿಷ್ ಅಧಿಪತ್ಯದಿಂದ ಬಹಳ ಮಟ್ಟಿಗೆ ಹೊರಬಂದರೂ ತನ್ನದೇ ಆದ ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ.  ಆದರೆ ಮೊತ್ತಮೊದಲು ರಾಷ್ಟ್ರಗೀತೆಯನ್ನು ಹೊಂದಬೇಕೆಂಬ ಪ್ರಯತ್ನ ನಡೆದದ್ದು ೧೯೫೧ ರಲ್ಲಿ. ಆವಾಗ  ಹೊಸ ರಾಷ್ಟ್ರಗೀತೆಯನ್ನು ರಚಿಸುವ ಸ್ಪರ್ಧೆಯನ್ನು  ಏರ್ಪಡಿಸಲಾಗಿತ್ತು.  ಅದರಲ್ಲಿ ಹೆನ್ರಿ ಕ್ರಿಪ್ಸ್ ಎನ್ನುವವರು ಬರೆದ 'ದಿಸ್ ಲ್ಯಾಂಡ್ ಇಜ್ ಮೈನ್' ಎನ್ನುವ ಗೀತೆ ಸ್ಪರ್ಧೆಯನ್ನು ಗೆದ್ದರೂ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಲಿಲ್ಲ.  ಇದೇ ತರಹದ ಎರಡನೆಯ ಪ್ರಯತ್ನವನ್ನು ೧೯೭೪ ರಲ್ಲಿ ಮಾಡಲಾಯಿತಾದರೂ ಯಾವುದೇ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಲಿಲ್ಲ. ಬಹಳ ಜನರ ಅಭಿಪ್ರಾಯ ಅಡ್ವಾನ್ಸ್ ಆಸ್ಟ್ರೇಲಿಯ ಫೇರ್ ಇದನ್ನೆ ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಬೇಕು ಎನ್ನುವುದಾಗಿತ್ತಾದರೂ ಇದಕ್ಕೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯೇ ಕಾರಣ ಎನಿಸುತ್ತದೆ. ಆವಾಗಿನ ಬಹಳಷ್ಟು ನಾಯಕರು  ಬ್ರಿಟೀಶ್ ಮೂಲದವರಾಗಿದ್ದು ತಮ್ಮ ಮೂಲದೇಶದ ರಾಜಸತ್ತೆಗೆ ಬದ್ದರಾಗಿದ್ದರು ಎನಿಸುತ್ತದೆ.ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಒಂದು ಹಂತದ ಸ್ವಾತಂತ್ರ್ಯ ಗಳಿಸಿದರೂ ಬ್ರಿಟಿಷ್ ಅಧಿಪತ್ಯದಿಂದ ಪೂರ್ತಿಯಾಗಿ ಹೊರಬಂದಿಲ್ಲದೇ(ಇವತ್ತಿನ ವರೆಗೂ) ಇರುವದು ಇದಕ್ಕೆ ಕಾರಣ. ಮತ್ತೆ ೧೯೭೭ರ ರಾಷ್ಟ್ರೀಯ ಚುನಾವಣೆಯಲ್ಲಿ  ಮತದಾರರಿಗೆ ಮತದಾನದೊಂದಿಗೆ ಯಾವ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಆರಿಸಿಕೊಳ್ಳುವ ಪ್ರಶ್ನೆಯನ್ನು ಮುಂದಿಡಲಾಗಿತ್ತು.  ಅದರ ಫಲಿತಾಂಶ 'ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್'  ಪರವಾಗಿದ್ದರೂ ಮತ್ತೆ ಏಳು ವರ್ಷಗಳ ನಂತರ ಅಂದರೆ ೧೯೮೪ರಲ್ಲಿ ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಆದರೂ ಸಹಿತ ಗಾಡ್ ಸೇವ್ ಕ್ವೀನ್ ಗೀತೆಗೆ ರಾಯಲ್ ರಾಷ್ಟ್ರಗೀತೆ ಎನ್ನುವ ಪಟ್ಟಕೊಟ್ಟು ಬ್ರಿಟೀಶ ರಾಜಸತ್ತೆಯ ಜನರು ಆಷ್ಟ್ರೇಲಿಯಾಕೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ.


ADVANCE AUSTRALIA FAIR


Australians all let us rejoice,
For we are young and free;
We’ve golden soil and wealth for
toil;

Our home is girt by sea;
Our land abounds in nature’s gifts
Of beauty rich and rare;
In history’s page, let every stage
Advance Australia Fair.

In joyful strains then let us sing,
Advance Australia Fair.

Beneath our radiant Southern Cross
We’ll toil with hearts and hands;
To make this Commonwealth of ours
Renowned of all the lands;
For those who’ve come across the seas
We’ve boundless plains to share;
With courage let us all combine
To Advance Australia Fair.

In joyful strains then let us sing,
Advance Australia Fair


ಅಡ್ವಾನ್ಸ್ ಅಷ್ಟ್ರೇಲಿಯಾ ಫೇರ್

ಆಷ್ಟ್ರೇಲಿಯನ್ಸ್ ಆಲ್ ಲೆಟ್ ಆಸ್ ರೆಜೊಯ್ಸ್
ಫಾರ್ ವಿ ಆರ್ ಯಂಗ್ ಆಂಡ ಫ್ರೀ
ವಿ ಹ್ಯಾವ್ ಗೋಲ್ಡನ್ ಸೌಲ್ ಆಂಡ ವೆಲ್ಥ್ ಫಾರ್ ಟೌಲ್
ಅವರ್ ಹೋಮ್ ಈಸ್ ಗಿರ್ಟ್ ಭಾಯ್ ಸಿ
ಅವರ ಲ್ಯಾಂಡ್ ಅಬೌಂಡ್ಸ್ ಇನ್ ನೇಚರ್ಸ್ ಗಿಫ್ಟ್ಸ್
ಆಫ್ ಬ್ಯುಟಿ ರಿಚ್ ಆಂಡ ರೇರ್
ಇನ್ ಹಿಸ್ಟರಿ’ಸ್ ಪೇಜ್,ಲೆಟ್ ಎವೆರಿ ಸ್ಟೇಜ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಬಿನೀತ್ ಅವರ್ ರೇಡಿಯಂಟ್ ಸೌಥರ್ನ್ ಕ್ರಾಸ್
ವಿ ವಿಲ್ ಟೌಲ್ ವಿತ್ ಹಾರ್ಟ್ಸ್ ಆಂಡ ಹ್ಯಾಂಡ್ಸ್
ಟು ಮೇಕ್ ದಿಸ್ ಕಾಮನ್‌ವೆಲ್ತ್ಸ್ ಆಫ್ ಅವರ್ಸ್
ರಿನೌನ್ ಆಫ್ ಆಲ್ ದ ಲ್ಯಾಂಡ್ಸ್
ಫಾರ್ ದೋಸ್ ಹೂ ಕಮ್ ಅಕ್ರಾಸ್ ದ್ ಸಿಸ್
ವಿ ಹ್ಯಾವ್ ಬೌಂಡಲೆಸ್ ಪ್ಲೇನ್ಸ್ ಟು ಶೇರ್
ವಿತ್ ಕರೇಜ್ ಲೆಟ್ ಅಸ್ ಆಲ್ ಕಂಬೈನ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್
 
 


ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್ ಕನ್ನಡ ಭಾವಾನುವಾದದ ಒಂದು ಪ್ರಯತ್ನ

ನಮ್ಮ ಅಷ್ಟ್ರೇಲಿಯಾ  ಮುನ್ನಡೆಯಲಿ ಚೆನ್ನಾಗಿ
ನಾವೆಲ್ಲ ಆಷ್ಟ್ರೇಲಿಯನ್ನರು ಸಂಭ್ರಮಿಸೋಣ
ನಮ್ಮ ಈ ಹೊಸ ದೇಶದ ಯೌವನ ಮತ್ತು  ಸ್ವಾತಂತ್ರ್ಯಕ್ಕಾಗಿ

ನಮಗಿರುವದು ಬಂಗಾರದಂತಹ ಭೂಮಿ ಮತ್ತು ದುಡಿಯಲು ಅಪರಿಮಿತ ಭಾಗ್ಯ
ನಮ್ಮ ತಾಯ್ನಾಡನ್ನು ಸುತ್ತುವರಿದಿದೆ ಸುಂದರವಾದ ಸಮುದ್ರ
ಹಾಗೂ ಒಳ ಭಾಗಗಳಲ್ಲಿ ತುಂಬಿಕೊಂಡಿವೆ ನಿಸರ್ಗದ ಖಣಿಗಳು ಸಮೃದ್ಧ

ಇತಿಹಾಸದ ಪುಟಗಳಲ್ಲಿ ಪ್ರತಿ ಹಂತಗಳಲ್ಲಿ
ನಮ್ಮ ಅಷ್ಟ್ರೇಲಿಯಾ  ಮುನ್ನಡೆಯಲಿ ಚೆನ್ನಾಗಿ

ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ

ನಮ್ಮ ಸೌಥರ್ನ್ ಕ್ರಾಸ್‌ನ ಪ್ರಭೆಯ ಅಂಬರದ ಕೆಳಗೆ
ನಾವೆಲ್ಲ ಮನಸುಗಳೊಂದಿಗೆ ಕೈ-ಕೈ ಜೋಡಿಸಿ
ನಮ್ಮ ಈ ನಾಡನ್ನು ಪ್ರಸಿದ್ಧಗೊಳಿಸೋಣ.

ನಾವೆಲ್ಲ ಸಾಗರಗಳ ದಾಟಿ ಈ ನೆಲವ ಅಪ್ಪಿಕೊಂಡವರು
ಈ ನೆಲದೊಂದಿಗೆ ಅನಂತ ಸಾದ್ಯತೆಗಳನ್ನು ಒಬರಿಗೊಬ್ಬರು ಹಂಚಿಕೊಳ್ಳುವವರು.
ಎಲ್ಲರೂ ಒಟ್ಟಾಗಿ ಧೈರ್ಯದಿಂದ ಈ ದೇಶವ ಮುನ್ನಡೆಸೋಣ.

ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಮತ್ತೆ ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ

Friday, 11 October 2013

ರಾಷ್ಟ್ರೀಯ ಲಾಂಛನ- ಕೋಟ್ ಆಫ್ ಆರ್ಮ್ಸ್


ಕೋಟ್ ಆಫ್ ಆರ್ಮ್ಸ್ ಅನ್ನುವದು ಆಷ್ಟ್ರೇಲಿಯದ ರಾಷ್ಟ್ರೀಯ ಲಾಂಛನವಾಗಿದ್ದು ಇದರಲ್ಲಿ ಒಂದು ಫಲಕ ಕೇಂದ್ರ ಭಾಗದಲ್ಲಿದ್ದು ಆ ಫಲಕವನ್ನು ಕಾಂಗರೂ ಮತ್ತು ಎಮು ಪಕ್ಷಿ ಅಕ್ಕ-ಪಕ್ಕದಲ್ಲಿ  ಹಿಡಿದುಕೊಂಡಿರುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಈ ಪದಕದ ಕೆಳಭಾಗದಲ್ಲಿ  ಆಷ್ಟ್ರೇಲಿಯದ ರಾಷ್ಟ್ರೀಯ ಹೂವಿನ ಗಿಡ ಎಂದೆನಿಸಿರುವ - ಬಂಗಾರ ಬಣ್ಣದ ವಾಟ್ಟಲ್‌ನ ಹೂ-ಎಲೆ-ಟೊಂಗೆಗಳು ಹರಡಿಕೊಂಡಿವೆ.


ನಡುವಿನ ಪದಕದಲ್ಲಿ ಎಲ್ಲ ಆರೂ ರಾಜ್ಯಗಳನ್ನು ಪ್ರತಿನಿಧಿಸುವ ಆರು ಲಾಂಛನಗಳು ಈ ರೀತಿಯಾಗಿವೆ.
ಮೇಲಿನ ಸಾಲಿನಲ್ಲಿ
ಕೆಂಪುಬಣ್ಣದ ಸಂತ ಜಾರ್ಜ್ ಕ್ರಾಸ್-ನ್ಯೂಸೌಥವೇಲ್ಸ್
ನೀಲಿ ಬಣ್ಣದ ಪಟ್ಟಿಯಲ್ಲಿರುವ ಕಿರೀಟ ಮತ್ತು ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ-ವಿಕ್ಟೋರಿಯಾ
ತಿಳಿನೀಲಿ ಬಣ್ಣದ ಮಾಲ್ತೀಸ್ ಕ್ರಾಸ್‌ನಲ್ಲಿ ಕಿರೀಟ-ಕ್ವೀನ್ಸ್‌ಲ್ಯಾಂಡ್
ಕೆಳಗಿನ ಸಾಲಿನಲ್ಲಿ
ಆಷ್ಟ್ರೇಲಿಯದ ಬಿಳಿ ಪಟ್ಟಿಯ ಕಾಗೆ-ಸೌತ್ ಆಷ್ಟ್ರೇಲಿಯಾ
ಕಪ್ಪು ಹಂಸ-ವೆಸ್ಟರ್ನ್ ಆಷ್ಟ್ರೇಲಿಯಾ
ಕೆಂಪು ಸಿಂಹ- ತಾಸ್ಮೇನಿಯಾ
ಇವಲ್ಲದೆ ಈ ಫಲಕದ ಮೇಲೆ ಕಾಮನ್‌ವೆಲ್ಥ ನಕ್ಷತ್ರವಿದ್ದು ಈ ನಕ್ಷತ್ರ ಏಳು ಮೂಲೆಬಿಂದುಗಳಿಂದಾಗಿದ್ದು ಆಷ್ಟ್ರೇಲಿಯಾದ ಆರು ರಾಜ್ಯಗಳೊಂದಿಗೆ ಇನ್ನುಳಿದ ದ್ವೀಪ ಪ್ರಾಂತಗಳನ್ನು ಪ್ರತಿನಿಧಿಸುತ್ತದೆ.

ಈ ಲಾಂಛನದಲ್ಲಿರುವ ಕೆಂಪು ಕಾಂಗರು ಮತ್ತು ಎಮು ಪಕ್ಷಿಗಳು ಆಷ್ಟ್ರೇಲಿಯದಲ್ಲಿ ಮಾತ್ರ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ ಹಿಮ್ಮುಖವಾಗಿ ನಡೆಯಲು ಬರುವದಿಲ್ಲ ಎಂಬ (ಮುಂದೆ ಮುಖ ಮಾಡಿ ಮಾತ್ರ ನಡೆಯುವದು ಅಭಿವೃದ್ಧಿಯ ಸಂಕೇತ)ಕಾರಣದಿಂದ ಇವುಗಳನ್ನು ಲಾಂಛನದಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಈ ಕಾರಣ ಅಷ್ಟು ಸರಿಯಲ್ಲ. ಇವು ಹಿಮ್ಮುಖವಾಗಿಯೂ ಒಂದೊಂದೆ ಹೆಜ್ಜೆಯಂತೆ ಸ್ವಲ್ಪ ಮಾತ್ರ (ದನಕರುಗಳಂತೆ) ನಡೆಯಬಲ್ಲವು.
 


ಕೋಟ್ ಆಫ್ ಆರ್ಮ್ಸ್‌ನ್ನು ೧೯೦೮ ರ ಮೇ ೭ರಂದು ಅಧಿಕೃತವಾಗಿ ರಾಷ್ಟ್ರೀಯ ಲಾಂಛನವಾಗಿ ಘೋಷಿಸಲಾಯಿತು. ಇದನ್ನು ಎಲ್ಲ ಸರಕಾರಿ ಸ್ವಾಮ್ಯದ ಕಚೇರಿಗಳಲ್ಲಿ, ಕಾಗದ ಪತ್ರಗಳಲ್ಲಿ, ಪಾಸ್‌ಪೋರ್ಟಗಳ ಮೇಲೆ, ಕೆಲ ಸೈನಿಕ ಪಡೆಗಳ ಬ್ಯಾಡ್ಜ್ ಗಳ ಮೇಲೆ ಅಧಿಕೃತವಾಗಿ ಬಳಸಲಾಗುತ್ತದೆ.

Saturday, 28 September 2013

ಆಷ್ಟ್ರೇಲಿಯಾದ ರಾಷ್ಟ್ರೀಯ ಧ್ವಜ.





ಆಷ್ಟ್ರೇಲಿಯಾದ ಈಗಿನ ಧ್ವಜ ಅನೇಕ ಬಾರಿ ಬದಲಾವಣೆಗೆ ಒಳಗಾಗಿದ್ದು, ಇದರ ಮೂಲ ಧ್ವಜ ವನ್ನು ಮೊದಲನೆ ಬಾರಿಗೆ ಮೆಲ್ಬರ್ನದಲ್ಲಿ ೧೯೦೧ ಸೆಪ್ಟೆಂಬರ್ ೩ರಂದು ಹಾರಿಸಲಾಯಿತು. ಆದರಿಂದ ಸೆಪ್ಟೆಂಬರ ೩ನ್ನು ರಾಷ್ಟ್ರೀಯ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ.

ಆಷ್ಟ್ರೇಲಿಯಾದ ಧ್ವಜದಲ್ಲಿ ಮೂರು ಮುಖ್ಯ ಲಾಂಛನಗಳನ್ನು ಉಪಯೋಗಿಸಲಾಗಿದ್ದು ಅವು ಇಂತಿವೆ. ೧.ಯುನಿಯನ್ ಜಾಕ್ ಧ್ವಜ, ೨.ಕಾಮನ್‌ವೆಲ್ಥ್ ನಕ್ಷತ್ರ ಮತ್ತು ೩.ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ.

೧.ಯುನಿಯನ್ ಜಾಕ್ ಧ್ವಜ,
ಯುನಿಯನ ಜಾಕ್ ಧ್ವಜ ನಿಜವಾಗಿಯೂ ಬ್ರಿಟನ್‌ದ ಧ್ವಜವಾಗಿದ್ದು ಆಷ್ಟ್ರೇಲಿಯದ ಧ್ವಜದಲ್ಲಿ  ಅದನ್ನು ಉಪಯೋಗಿಸುವದು ಎಷ್ಟರ ಮಟ್ಟಿಗೆ ಸರಿಎನ್ನುವದು ಯಕ್ಷ ಪ್ರಶ್ನೆಯಾಗಿದೆ.

ಯುನಿಯನ್ ಧ್ವಜವೂ ಮೂರು ಅಂಶಗಳನ್ನು ಒಳಗೊಂಡಿದ್ದು ಅದರಲ್ಲಿ ಬರುವ ಅಡ್ಡ , ಲಂಬ ಮತ್ತು ಮೂಲೆಯ ಪಟ್ಟಿಗಳು ಬ್ರಿಟನ್‌ದ ಮೂರು ಪ್ರಾಂತಗಳನ್ನು ಪ್ರತಿನಿಧಿಸುತ್ತವೆ. ಕೆಂಪು ಅಡ್ಡ ಪಟ್ಟಿ ಇಂಗ್ಲೆಂಡ್‌ನ ಸಂತ ಜಾರ್ಜ್‌ನ ಕ್ರಾಸ್‌ನ್ನೂ, ಮೂಲೆಯಿಂದ ಮೂಲೆಗಿರುವ ಬಿಳಿ ಪಟ್ಟಿ ಸ್ಕಾಟ್‌ಲ್ಯಾಂಡ್‌ನ ಸಂತ ಆಂಡ್ರು ಕ್ರಾಸ್‌ನ್ನೂ, ಹಾಗೆಯೇ ಇನ್ನೊಂದು ಮೂಲೆಯ ಕೆಂಪು ಪಟ್ಟಿ  ಐರ್ಲೆಂಡಿನ ಸಂತ ಪ್ಯಾಟ್ರಿಕ್ ಕ್ರಾಸ್‌ನ್ನೂ ಪ್ರತಿನಿಧಿಸುತ್ತವೆ. ಹೀಗೆ ಈ ಬ್ರಿಟೀಷರ ಯುನಿಯನ ಜಾಕ್ ಧ್ವಜವನ್ನು ಆಷ್ಟ್ರೇಲಿಯ ತನ್ನ ಧ್ವಜದ ಒಂದು ಭಾಗವಾಗಿ ಉಪಯೋಗಿಸುವದು ತನ್ನ ಮೇಲೆ  ಬ್ರಿಟೀಷ ಅಧಿಪತ್ಯವನ್ನು ಒಪ್ಪಿಕೊಂಡಿರುವದನ್ನು ತೋರಿಸಿದರೂ ಇದಕ್ಕೆ ಹಲವರ ವಿರೋಧವೂ ಇದೆ.

೨. ಕಾಮನ್‌ವೆಲ್ಥ್ ನಕ್ಷತ್ರ

ಧ್ವಜದಲ್ಲಿ ಯುನಿಯನ ಜಾಕ್‌ನ ಕೆಳ ಭಾಗದಲ್ಲಿರುವ ಈ ನಕ್ಷತ್ರ ಏಳು ಮೂಲೆಬಿಂದುಗಳನ್ನು ಹೊಂದಿದ್ದು ಆಷ್ಟ್ರೇಲಿಯಾದ ಆರು ರಾಜ್ಯಗಳೊಂದಿಗೆ ಇನ್ನುಳಿದ ದ್ವೀಪ ಪ್ರಾಂತಗಳನ್ನು ಪ್ರತಿನಿಧಿಸುತ್ತದೆ.

೩.ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ.

ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ(ಐದು ನಕ್ಷತ್ರಗಳು) ಧ್ವಜದ ಬಲಭಾಗದಲ್ಲಿದ್ದು ಇದು ದಕ್ಷಿಣ ಭೂಗೋಲದಿಂದ ಕಾಣಲ್ಪಡುವ ಒಂದು ಆಕಾಶ ನಕ್ಷತ್ರ ಪುಂಜ. ಇದನ್ನು ನಮ್ಮ ಭಾರತೀಯ ಖಗೋಲ ಶಾಶ್ತ್ರದ ಪ್ರಕಾರ ಇದನ್ನು ತ್ರಿಶಂಕು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ.
ಯುರೋಪಿನಲ್ಲಿ ಆಷ್ಟ್ರೇಲಿಯದ ದಾರಿಯನ್ನು ಕಂಡು ಹಿಡಿದ ಮೇಲೆ ಈ ನಕ್ಷತ್ರ ಪುಂಜದಬಗ್ಗೆ ಹಳ ಚರ್ಚೆಗಳಾಗುತ್ತಿದ್ದವು. ಹೀಗಾಗಿ ಈ ನಕ್ಷತ್ರ ಪುಂಜಕ್ಕೂ ಆಷ್ಟ್ರೇಲಿಯಾಕ್ಕೂ ಒಂದು ಅವಿನಾಭಾವ ಸಂಭಂದವನ್ನು ಕಲ್ಪಿಸಿ ಇದನ್ನು ಧ್ವಜದಲ್ಲಿ ಬಳಸಿಕೊಳ್ಳಲಾಯಿತು.



೧೯೦೧ರಲ್ಲಿ ಆಷ್ಟ್ರೇಲಿಯ ಒಂದು ಸ್ವತಂತ್ರ ದೇಶವೆಂದು ಘೋಷಣೆಯಾದಾಗ ಅದರ ಧ್ವಜವನ್ನು ನಿರ್ಧರಿಸುವದಕ್ಕಾಗಿ ಹಲವು ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಈ ಸ್ಪರ್ದೆಯಲ್ಲಿ ಧ್ವಜವನ್ನು ವಿನ್ಯಾಸ ಮಾಡುವಾಗ ಭ್ರಿಟನ್‌ದ ಯುನಿಯನ್ ಜಾಕ್ ಮತ್ತು ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜವನ್ನು ಕಡ್ಡಾಯವಾಗಿ ಬಳಸಬೇಕೆಂಬುದು ನಿಯಮವಾಗಿತ್ತು. ಆವಗಿನಿಂದ ಇನ್ನೂತನಕ ಬ್ರಿಟೀಷ ಸಾಮ್ರಾಜ್ಯಶಾಹಿಯ ಭಾಗವಾಗಿಯೆ ಇರುವ ಆಷ್ಟ್ರೇಲಿಯಾದ ಧ್ವಜದಲ್ಲಿ ಇವುಗಳನ್ನು ಬಳಸಬೇಕೆನ್ನುವ ಈ ನಿಯಮ ಆವಾಗ ಅಸಹಜವಾಗೇನು ತೋರಿರಲ್ಲವಾದರೂ ಸ್ವಲ್ಪ ಜನರಿಗೆ ಇದು ಸರಿಯೆನಿಸಲಿಲ್ಲ. ಆವಾಗ ಈ ವಿಷಯವಾಗಿ ಸ್ವಲ್ಪ ಚರ್ಚೆ ನಡೆದರೂ ಕೊನೆಗೆ ಈ ಲಾಂಛನಗಳನ್ನು ಬಳಸಿಯೇ ವಿನ್ಯಾಸ ಮಾಡಬೇಕೆಂದು  ನಿರ್ದರಿಸಲಾಯಿತು. ಸರಕಾರದ ವತಿಯಿಂದ ನಡೆಯಲಾದ ಸ್ಪರ್ದೆಯಲ್ಲಿ ಸುಮಾರು ೩೨೮೨೩ ವಿನ್ಯಾಸಗಳು ಸ್ಪರ್ದಿಸಿದ್ದು ಅದರಲ್ಲಿ ಐದು ಜನರ ವಿನ್ಯಾಸಗಳನ್ನು ಒಂದುಗೂಡಿಸಿ ಆಷ್ಟ್ರೇಲಿಯಾದ ಧ್ವಜವನ್ನು ನಿರ್ಧರಿಸಲಾಯಿತು.

ಧ್ವಜದಲ್ಲಿ ಬದಲಾವಣೆಗೆ ಒತ್ತಾಯ.

ಆಷ್ಟ್ರೇಲಿಯಾದ ಧ್ವಜದಲ್ಲಿ ಬ್ರಿಟೀಷ ಯುನಿಯನ್ ಜಾಕ್ ದ್ವಜ ಇರುವದನ್ನು ಅವಾಗಾವಾಗ ಬಹಳಷ್ಟು ಜನ ವಿರೊಧಿಸುತ್ತಲೇ ಬಂದಿರುವದರಿಂದ ಇದರ ಬಗ್ಗೆ ಬಹಳ ಸಲ ಚರ್ಚೆಯಾಗುತ್ತಿರುತ್ತದೆ. ಅದರಲ್ಲೂ ೧೯೮೮ರಲ್ಲಿ ಆಷ್ಟ್ರೇಲಿಯಾದ ದ್ವಿಶತಮಾನೋತ್ಸವದ  ಸಂದರ್ಭದಲ್ಲಿ ಆಗಿನ ಪ್ರಧಾನ ಮಂತ್ರಿ ಪೌಲ್ ಕೀಟಿಂಗ್ ಅವರು ಧ್ವಜದ ಬದಲಾವಣೆಗೆ ಒತ್ತಾಯಿಸಿ 'ನಮ್ಮ ದೇಶದ ಧ್ವಜದಲ್ಲಿ ಇನ್ನೊಂದು ದೇಶದ ಧ್ವಜವನ್ನು ಬಳಸುವ ತನಕ ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ಪೂರ್ಣವಾಗುವದಿಲ್ಲ’ ಎಂದು ಹೇಳಿದ್ದು ಬಹಳ ಜನರ ಅಭಿಪ್ರಾಯವಾಗಿದೆ. ಆಸ್‌ಫ್ಲ್ಯಾಗ  ಎನ್ನುವ ಸಂಸ್ಥೆ ಧ್ವಜದ ಬದಲಾವಣೆಗೆ ಒತ್ತಾಯಿಸುವಲ್ಲಿ ಮುಂಚೂಣಿಯಲ್ಲಿದ್ದರೆ ಹಾಗೆಯೇ ಆಷ್ಟ್ರೇಲಿಯನ್ ನ್ಯಾಶನಲ್ ಫ್ಲ್ಯಾಗ  ಸಂಸ್ಥೆ ಬದಲಾವಣೆಯನ್ನು ವಿರೋಧಿಸುತ್ತದೆ.

Saturday, 21 September 2013

ಆಸ್ಟ್ರೇಲಿಯಾದ ರಾಷ್ಟ್ರೀಯ ಚಿಹ್ನೆಗಳು.

ಪ್ರತಿಯೊಂದು ದೇಶವೂ ತನ್ನದೇ ಆದಂತಹ ಚಿಹ್ನೆಗಳನ್ನು ಹೊಂದಿರುತ್ತದೆ. ತನ್ನ ಸಾರ್ವಭೌಮತೆಯೊಂದಿಗೆ ತನ್ನ ನೆಲದ ವಿಶಿಷ್ಟತೆಗಳನ್ನು ಈ ಚಿಹ್ನೆಗಳ ಮೂಲಕ ಅಭಿವ್ಯಕ್ತಪಡಿಸುವದು ಪ್ರತಿ ದೇಶಕ್ಕೂ ಅಭಿಮಾನದ ಸಂಗತಿ. ಹಾಗೆಯೇ ಆಷ್ಟ್ರೇಲಿಯಾದ ಚಿಹ್ನೆಗಳೂ ಕೂಡ ಈ ದೇಶದ ವಿಶಿಷ್ಟತೆಗಳನ್ನು ಬಿಂಬಿಸುತ್ತವೆ.

ಅಧಿಕೃತ ರಾಷ್ಟ್ರೀಯ ಚಿಹ್ನೆಗಳು.


                                                         
                                                  ೧.    ರಾಷ್ಟ್ರೀಯ ದ್ವಜ.
                                             




                                         ೨.    ರಾಷ್ಟ್ರೀಯ ಲಾಂಛನ-  ಕೋಟ್ ಆಫ಼್ ಆರ್ಮ್ಸ್



                                            ೩.    ರಾಷ್ಟ್ರ ಗೀತೆ-   ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಅಡ್ವಾನ್ಸ್ ಅಷ್ಟ್ರೇಲಿಯಾ ಫೇರ್
ಆಷ್ಟ್ರೇಲಿಯನ್ಸ್ ಆಲ್ ಲೆಟ್ ಆಸ್ ರೆಜೊಯ್ಸ್
ಫಾರ್ ವಿ ಆರ್ ಯಂಗ್ ಆಂಡ ಫೇರ್
ವಿ ಹ್ಯಾವ್ ಗೋಲ್ಡನ್ ಸೌಲ್ ಆಂಡ ವೆಲ್ಥ್ ಫಾರ್ ಟೌಲ್
ಅವರ್ ಹೋಮ್ ಈಸ್ ಗಿರ್ಟ್ ಭಾಯ್ ಸಿ
ಅವರ ಲ್ಯಾಂಡ್ ಅಬೌಂಡ್ಸ್ ಇನ್ ನೇಚರ್ಸ್ ಗಿಫ್ಟ್ಸ್
ಆಫ್ ಬ್ಯುಟಿ ರಿಚ್ ಆಂಡ ರೇರ್
ಇನ್ ಹಿಸ್ಟರಿ’ಸ್ ಪೇಜ್,ಲೆಟ್ ಎವೆರಿ ಸ್ಟೇಜ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಬಿನೀತ್ ಅವರ್ ರೇಡಿಯಂಟ್ ಸೌಥರ್ನ್ ಕ್ರಾಸ್
ವಿ ವಿಲ್ ಟೌಲ್ ವಿತ್ ಹಾರ್ಟ್ಸ್ ಆಂಡ ಹ್ಯಾಂಡ್ಸ್
ಟು ಮೇಕ್ ದಿಸ್ ಕಾಮನ್‌ವೆಲ್ತ್ಸ್ ಆಫ್ ಅವರ್ಸ್
ರಿನೌನ್ ಆಫ್ ಆಲ್ ದ ಲ್ಯಾಂಡ್ಸ್
ಫಾರ್ ದೋಸ್ ಹೂ ಕಮ್ ಅಕ್ರಾಸ್ ದ್ ಸಿಸ್
ವಿ ಹ್ಯಾವ್ ಬೌಂಡಲೆಸ್ ಪ್ಲೇನ್ಸ್ ಟು ಶೇರ್
ವಿತ್ ಕರೇಜ್ ಲೆಟ್ ಅಸ್ ಆಲ್ ಕಂಬೈನ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್

ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್



                                       ೪.    ರಾಷ್ಟ್ರೀಯ ಹೂವಿನ ಗಿಡ-   ಬಂಗಾರ ಬಣ್ಣದ ವಾಟ್ಟಲ್




                                                  ೫.    ರಾಷ್ಟ್ರೀಯ ರತ್ನದ ಕಲ್ಲು- ಓಪಲ್ 






ಅನಧಿಕೃತವಾದರೂ ಪ್ರಸಿದ್ಧವಾದ  ರಾಷ್ಟ್ರೀಯ ಚಿನ್ಹೆಗಳು.
                                 
                                         ೧.    ರಾಷ್ಟ್ರೀಯ ಪ್ರಾಣಿ-  ಕಾಂಗರು


                                              ೨.    ರಾಷ್ಟ್ರೀಯ ಪಕ್ಷಿ-  ಎಮು


                                 ೩.    ಪ್ರಸಿಧ್ದ ಕಟ್ಟಡ-    ಒಪೆರಾ ಹೌಸ್ ಮತ್ತು ಹಾರ್ಬರ್ ಸೇತುವೆ.


                                         ೪.    ಪ್ರಸಿದ್ಧ ನೈಸರ್ಗಿಕ ಸ್ಥಳ-    ಉಲುರು ಬೆಟ್ಟ




ಇವೆಲ್ಲವುಗಳ ಬಗ್ಗೆ ವಿವರವಾದ ಮಾಹಿತಿ ಮುಂದಿನ ಪೋಸ್ಟುಗಳಲ್ಲಿ......

Saturday, 24 August 2013

ಆಸ್ಟ್ರೇಲಿಯಾದ ನಗದಿನ ಪುರಾಣ


ಜಗತ್ತಿನಲ್ಲೆ ಪ್ರಪ್ರಥಮವಾಗಿ ಪ್ಲಾಸ್ಟಿಕ್ ನೋಟುಗಳನ್ನು ತಯಾರಿಸಿ, ಬಳಸಿದ ಕೀರ್ತಿ ಆಷ್ಟ್ರೇಲಿಯಕ್ಕೆ ಸಲ್ಲುತ್ತದೆ. ಪ್ಲಾಸ್ಟಿಕ್ ನೋಟುಗಳು ಪಾಲಿಮರ್‌ನಿಂದ ತಯಾರಿಸ್ಲಟ್ಟಿದ್ದು  ಇವುಗಳಿಂದ ಖೋಟಾನೋಟುಗಳನ್ನು ತಯಾರಿಸುವದು ಅಷ್ಟು ಸುಲಭವಲ್ಲ.  ಅಷ್ಟೇ ಅಲ್ಲದೆ ಇವುಗಳನ್ನು ಶುಭ್ರವಾಗಿಟ್ಟುಕೊಳ್ಳಬಹುದು ಮತ್ತು ಸರಾಗವಾಗಿ ತೊಳೆಯಬಹುದು. ಈ ನೋಟುಗಳನ್ನು ಆಷ್ಟ್ರೇಲಿಯ ಪ್ರಪ್ರಥಮವಾಗಿ ೧೯೮೮ರಲ್ಲಿ ಚಲಾವಣೆಗೆ ತಂದಿತು.

ಇಲ್ಲಿನ ಮೂಲನಿವಾಸಿಗಳು ಯುರೋಪಿನ ಜನರ ಆಗಮನಕ್ಕಿಂತ ಮೊದಲು ಯಾವದೇತರಹದ ಹಣವನ್ನು ಉಪಯೋಗಿಸುತ್ತಿರಲಿಲ್ಲ ಎನಿಸುತ್ತದೆ. ಆದರೆ ಯುರೋಪಿನ ವಸಾಹತುಗಾರರು ಇಲ್ಲಿಗೆ ಮೊದಲು ಬಂದಾಗ ಸ್ವಲ್ಪ ಮಟ್ಟಿಗೆ ಬ್ರಿಟೀಷ್ ನಗದನ್ನು ಉಪಯೋಗಿಸುತ್ತಿದ್ದರೂ ಹೆಚ್ಚಾಗಿ         ತಮ್ಮ ತಮ್ಮಲಿಯ ವಸ್ತುಗಳ ವಿನಿಮಯದ ಮೂಲಕ ವ್ಯಾಪಾರಮಾಡುತ್ತಿದ್ದರು. ಅದರಲ್ಲೂ ರಮ್‌ನಂತೂ ಹೆಚ್ಚಾಗಿ ಹಣದ ರೂಪದಲ್ಲಿ ಬಳಸುತ್ತಿದ್ದರು. ಬಹುಶಃ ರಮ್‌ನ್ನು ಬಹಳ ದಿನ  ಶೇಖರಿಸಿಡಬಹುದು ಮತ್ತು ಅದರ ಬೆಲೆ ಯಾವಾಗಲೂ ಕಡಿಮೆ ಆಗುವದಿಲ್ಲ ಎನ್ನುವದೇ ಇದಕ್ಕೆ ಕಾರಣವಾಗಿರಬಹುದು.
೧೮೧೮ರಲ್ಲಿ ಬ್ಯಾಂಕ ಆಫ್ ನ್ಯುಸೌಥ ವೇಲ್ಸ್ ’ಪೋಲಿಸ್ ಫ಼ಂಡ್ ನೋಟು’ಗಳನ್ನು ಮುದ್ರಿಸಿದ ಮೇಲೆ ಜನರು ಅವುಗಳನ್ನೇ ಉಪಯೋಗಿಸ ತೊಡಗಿದರು. ಇವೇ ಆಷ್ಟ್ರೇಲಿಯಾದ ಮೊದಲ ಅಧಿಕೃತ ನೋಟುಗಳು.
೧೯೦೧ರಲ್ಲಿ ಆಷ್ಟ್ರೇಲಿಯ ಒಂದು ಸ್ವತಂತ್ರ ದೇಶವೆಂದು ಘೋಷಣೆಯಾದಾಗ ಅದು ತನ್ನದೇ ಆದಂತಹ ನಗದನ್ನು ಹೊಂದಬೇಕಾಯಿತು. ಅದರಂತೆ ೧೯೧೩ರಲ್ಲಿ ಆಷ್ಟ್ರೇಲಿಯಾ ಹಳೆಯ ಬ್ರಿಟೀಶ ಪದ್ದತಿಯಂತೆ ತನ್ನ ಪ್ರಥಮ ’ಆಷ್ಟ್ರೇಲಿಯನ್ ಪೌಂಡ್’ನೋಟುಗಳನ್ನು ಹೊರತಂದಿತು. (೧ಪೌಂಡ್=೨೦ಶೀಲಿಂಗ್,೧ಶೀಲಿಂಗ್=೧೨ಪೆನ್ಸ್).

೧೯೬೬ರ ತನಕ ಆಷ್ಟ್ರೇಲಿಯ ಈ ಬ್ರಿಟೀಶ ಪದ್ದತಿಯ ಪೌಂಡ್ ನಗದನ್ನೇ ಅನುಸರಿಸುತ್ತಿದ್ದು, ಆ ವರ್ಷದ ಫ಼ೆಬ್ರುವರಿ ೧೪ರಂದು ದಶಮಾನ ಪದ್ದತಿಗೆ ಬದಲಾಯಿಸಿಕೊಂಡು ಡಾಲರ ಎಂದು ಕರೆಯಲು ಪ್ರಾರಂಭಿಸಿತು.

೧೯೮೩ಕ್ಕಿಂತ ಮೊದಲು ಆಷ್ಟ್ರೇಲಿಯದ ಡಾಲರ್ ಬೆಲೆಯನ್ನು ಸ್ಥಿರವಾಗಿಟ್ಟು ಅಂತರಾಷ್ಟ್ರೀಯ ವ್ಯವಹಾರವನ್ನು ಮಾಡಲಾಗುತ್ತಿತ್ತು. ಆದರೆ ೧೯೮೩ರ ಡಿಸೆಂಬರ್೧೨ ರಂದು ಅಂತರಾಷ್ಟ್ರೀಯ ಮಾರುಕಟ್ಟೆಯ ಆಗುಹೋಗುಗಳಿಗೆ ತಕ್ಕಂತೆ ಬದಲಾಯಿಸುವ ವ್ಯವಸ್ಥೆಗೆ ಮಾರ್ಪಡಿಸಲಾಯಿತು.

ಆಷ್ಟ್ರೇಲಿಯದ ಈಗಿನ ನೋಟು/ನಾಣ್ಯಗಳು.

ನೋಟುಗಳು


  1.  ಡಾಲರ ೫ ನೋಟು-----ಇದರಲ್ಲಿ ಎಲಿಜಬೆಥ್ ರಾಣಿ ಮತ್ತು ಕ್ಯಾನ್ಬೆರಾದ ಸಂಸತ ಭವನ ಇವುಗಳನ್ನು ತೋರಿಸಲಾಗಿದೆ.
  2. ಡಾಲರ ೧೦ರ ನೋಟು-----ಇದರಲ್ಲಿ ಸಾಹಿತಿ/ಕವಿ ಬೆಂಜೊ ಪ್ಯಾಟೆರ್ಸನ್ ಮತ್ತು ಡೇಮ್ ಮೆರಿ ಗಿಲ್ಮೋರ್ ಅವರನ್ನು ತೋರಿಸಲಾಗಿದೆ ಮತ್ತು ಅವರ ಕೃತಿಗಳ ಕೆಲಭಾಗಗಳನ್ನು ಸಣ್ಣದಾಗಿ ಮುದ್ರಿಸಲಾಗಿದೆ.
  3.  ಡಾಲರ ೨೦ರನೋಟು-----ಇದರಲ್ಲಿ ರೆವೆರೆಂಡ ಜಾನ್ ಫಾಯ್ನ್ (ಇವರು ಜಗತ್ತಿನಲ್ಲಿ ಮೊದಲ ಬಾರಿಗೆ ಹ್ಯಾಲಿಕಾಪ್ಟರ್ ಮೂಲಕ ವೈದ್ಯಕೀಯ ತುರ್ತು ಸೇವೆ ಸಲ್ಲಿಸಬಹುದು ಎಂದು ತೋರಿಸಿಕೊಟ್ಟು ಅಂತಹ ಸಂಸ್ಥೆಯನ್ನು ಹುಟ್ಟುಹಾಕಿದರು.)ಮತ್ತು ಇನ್ನೊಂದು ನೋಟಿನಲ್ಲಿ ಮೆರಿ ರೈಬೆ ( ಇವರು ಅಪರಾದಿ ವಲಸೆಗಾರರಾಗಿ ೧೭೯೨ರಲ್ಲಿ ಆಷ್ಟ್ರೇಲಿಯಾಕೆ ಬಂದು ಮುಂದೆ ಅತಿ ದೊಡ್ಡ ಹಡಗು ಸಾಗಣಿಕಾ ಉದ್ದಿಮೆದಾರರಾದರು)ಇವರನ್ನು ತೋರಿಸಲಾಗಿದೆ.
  4. ಡಾಲರ ೫೦ರ ನೋಟು -----ಇದರಲ್ಲಿ ಮೂಲನಿವಾಸಿ ಬರಹಗಾರ ಸಂಶೋಧಕ ಡೆವಿಡ್ ಊನೈಪನ್ ಮತ್ತು  ಆಷ್ಟ್ರೇಲಿಯದ ಪ್ರಥಮ ಸಂಸತ ಸದಸ್ಯೆ ಏಡಿತ ಕೋವನ್ ಅವರನ್ನು ತೋರಿಸಲಾಗಿದೆ.
  5.  ಡಾಲರ ೧೦೦ರ ನೋಟು-----ಇದರಲ್ಲಿ ಡೆಮ್ ನೆಲ್ಲಿ ಮೆಲ್ಬಾ ಮತ್ತು ಪ್ರಸಿದ್ಧ ಸೈನಿಕ ಪಡೆ ಮುಖ್ಯಸ್ಥ ಸರ್ ಜಾನ್ ಮೋನಾಶ ಇವರನ್ನು ತೋರಿಸಲಾಗಿದೆ.

ನಾಣ್ಯಗಳು
  1. ೫ಸೆಂಟ್ ನಾಣ್ಯ-----ಇದರಲ್ಲಿ ಜಗತ್ತಿನ ಮೊಟ್ಟೆ ಇಡುವ ಎರಡು ಸಸ್ತನಿಗಳಲ್ಲಿ ಒಂದಾದ ಎಚಿಡ್ನಾ ಪ್ರಾಣಿಯ ಚಿತ್ರವನ್ನು ಟಂಕಿಸಲಾಗಿದೆ.
  2. ೧೦ ಸೆಂಟ್ ನಾಣ್ಯ-----ಇದರಲ್ಲಿ ಆಷ್ಟ್ರೇಲಿಯಾದ ಪೂರ್ವ ಕರಾವಳಿಯ ಕಾಡುಗಳಲ್ಲಿ ಕಾಣಸಿಗುವ ಗಂಡು ಲೈರ್‌ಬರ್ಡ್ ಪಕ್ಷಿಯನ್ನು ತೋರಿಸಲಾಗಿದೆ. 
  3. ೨೦ ಸೆಂಟ್ ನಾಣ್ಯ-----ಇದರಲ್ಲಿ ಇನ್ನೊಂದು ಮೊಟ್ಟೆಇಡುವ ಸಸ್ತನಿ ಪ್ಲೈಟಿಪಸ್‌ನ್ನು ಮುದ್ರಿಸಲಾಗಿದೆ.
  4. ೫೦ ಸೆಂಟ್ ನಾಣ್ಯ-----ಆಷ್ಟ್ರೇಲಿಯಾದ ರಾಷ್ಟ್ರ ಚಿನ್ಹೆಯನ್ನು ಬೇರೆ ಬೇರೆ ತರನಾಗಿ ಬೇರೆ-ಬೇರೆ ತರಹದ ೫೦ ಸೆಂಟ್ ನಾಣ್ಯಗಳಲ್ಲಿ ಮುದ್ರಿಸಲಾಗಿದೆ. ಆಷ್ಟ್ರೇಲಿಯಾದ ರಾಷ್ಟ್ರ ಚಿನ್ಹೆಯ ವಿಶೇಷತೆಯಂದರೆ ಇದರ ನಡುವೆ  ಆರು ರಾಜ್ಯಗಳ ಚಿನ್ಹೆಗಳನ್ನು ಹೊಂದಿದ ಫಲಕವಿದ್ದು ಈ ಫಲಕದ ಅಕ್ಕ-ಪಕ್ಕ ಕಾಂಗರೂ ಮತ್ತು ಎಮೂ ಪಕ್ಷಿಯನ್ನು ನಿಲ್ಲಿಸಲಾಗಿದೆ.
  5. ಡಾಲರ ೧ ನಾಣ್ಯ-----ಇದನ್ನು ೧೯೮೪ರಲ್ಲಿ ಡಾಲರ ೧ರ ನೋಟಿನ ಬದಲಾಗಿ ಚಲಾವಣೆಯಲ್ಲಿ ತರಲಾಯಿತು ಮತ್ತು ಇದರಲ್ಲಿ ಐದು ಕಾಂಗರೂಗಳನ್ನು ಟಂಕಿಸಲಾಗಿದೆ.
  6. ಡಾಲರ್ ೨ರನಾಣ್ಯ-----ಇದನ್ನು ೧೯೮೮ರಲ್ಲಿ ೨ ಡಾಲರ ನೋಟಿನ ಬದಲಾಗಿ ಚಲಾವಣೆಯಲ್ಲಿ ತರಲಾಯಿತು ಮತ್ತು ಇದರಲ್ಲಿ ಆಷ್ಟ್ರೇಲಿಯಾದ ಮೂಲನಿವಾಸಿ ಹಿರಿಯನೊಬ್ಬನ ಚಿತ್ರವನ್ನು ಮುದ್ರಿಸಲಾಗಿದೆ.

Sunday, 18 August 2013

ಆಸ್ಟೇಲಿಯಾದ ಇತಿಹಾಸ

ಆಸ್ಟೇಲಿಯಾ ಜಗತ್ತಿನಲ್ಲಿಯೇ ಅತೀ ದೊಡ್ಡದಾದಂತಹ ಒಂದು ಖಂಡದೇಶ.  ಆಸ್ಟ್ರೇಲಿಯಾ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮೂಡುವುದು ಇದು ಒಂದು ಬಿಳಿಯರ ದೇಶ ಎಂದು.  ಹಾಗೆಯೇ ಆಸ್ಟ್ರೇಲಿಯಾದ ಇತಿಹಾಸ ಎಂದ ತಕ್ಷಣ ಇಲ್ಲಿ ಬ್ರಿಟಿಷರು ತಮ್ಮ ವಸಾಹತನ್ನು ಸ್ಥಾಪಿಸಿದ ನಂತರ ಎಂದೇ ಭಾವಿಸುತ್ತಾರೆ.  ಆದರೆ ನಿಜವಾಗಿಯೂ ಆಸ್ಟ್ರೇಲಿಯಾದ ಇತಿಹಾಸದಲ್ಲಿ ಇಲ್ಲಿನ ಮೂಲನಿವಾಸಿಗಳು ಎಂದು ಕರೆಯಲ್ಪಡುವ ಒಂದು ಕಪ್ಪು ಜನಾಂಗದವರ, ಬ್ರಿಟೀಶ್ ಮತ್ತು ಇತರ ಯುರೋಪಿನ ವಲಸೆಗಾರರ ಅಷ್ಟೆ ಏಕೆ ಇತ್ತೀಚಿನ ದಶಕಗಳಲ್ಲಿ ವಲಸೆ ಬಂದ ಇತರ ಇನ್ನುಳಿದ ದೇಶಗಳ ಜನರ ಕಥೆಗಳು ಅಡಗಿವೆ.

ಆಸ್ಟೇಲಿಯಾದ ಮೂಲನಿವಾಸಿಗಳು

        ಆಸ್ಟೇಲಿಯಾದ ಮೂಲನಿವಾಸಿಗಳು ಈಗಿನ ಇಂಡೋನೇಷಿಯಾ ಎಂದು ಕರೆಯಲ್ಪಡುವ ಆಗ್ನೇಯ ಏಶಿಯಾ ಭಾಗದಿಂದ ೪೦,೦೦೦ - ೬೦,೦೦೦ ವರ್ಷಗಳ ಹಿಂದೆಯೇ ಇಲ್ಲಿಗೆ ವಲಸೆ ಬಂದರೆಂದು ಭಾವಿಸಲಾಗಿದೆ.  ಈ ಜನರು ಬ್ರಿಟಿಷರು ಬರುವುದಕ್ಕಿಂತ ಪೂರ್ವದಲ್ಲಿ ನಾಗರೀಕತೆಯ ಗಂಧಗಾಳಿಯನ್ನೇ ಅರಿತಿರಲಿಲ್ಲ. ಇವರಿಗೆ ಕೃಷಿ ಮತ್ತು ಹೈನುಗಾರಿಕೆ ಬಗ್ಗೆ ತಿಳಿದಿರಲಿಲ್ಲ. ಆದರೆ ಇವರ ಜೀವನಶೈಲಿ ತುಂಬಾ ಸರಳವಾಗಿತ್ತು ಮತ್ತು ಬೇಟೆಯಾಡಿ, ಮೀನು ಹಿಡಿದು ಆಹಾರವನ್ನು ಪಡೆದುಕೊಳ್ಳುತ್ತಿದ್ದರು. ಇಂಥ ದೊಡ್ಡ ದೇಶದ ತುಂಬ ಹರಡಿಕೊಂಡಿದ್ದರಿಂದ ವಿವಿಧ ಸಣ್ಣ ಸಣ್ಣ ಗುಂಪುಗಳಾಗಿ ವಾಸಿಸುತ್ತಿದ್ದು ತಮ್ಮ ತಮ್ಮದೇ ಆದಂತಹ ೨೫೦ ಕ್ಕೂ ಅಧಿಕ ಬೇರೆ-ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದರು.   ಅಷ್ಟೇ ಅಲ್ಲದೆ ಇವರು ತಮ್ಮದೇ ಆದಂತಹ ಸಂಸ್ಕೃತಿ, ಸಂಪ್ರದಾಯಗಳನ್ನು ಬೆಳೆಸಿಕೊಂಡಿದ್ದರು.  ಅವರ ನಂಬುಗೆಯ ಪ್ರಕಾರ ಡ್ರೀಮ್ ಟೈಮ್ ಎನ್ನುವ ಕಾಲದಲ್ಲಿ ಅತಿಮಾನುಷ ಶಕ್ತಿ ಜನರನ್ನು, ಭೂಮಿಯನ್ನು ಹಾಗೂ ಸೂರ್ಯನನ್ನು ರೂಪಿಸಿದೆ ಎನ್ನುವುದು.  ಈ ಡ್ರೀಮ್ ಟೈಮ್ ಎನ್ನುವ ಕಾಲದಲ್ಲಿ ಇಡೀ ಜಗತ್ತಿನ ನಿರ್ಮಾಣ ಹೇಗೆ ಆಯಿತು ಎನ್ನುವ ಹಲವಾರು ತರಹದ ಜಾನಪದ ಕಥೆಗಳು ಈ ಜನರ ವಿವಿಧ ಗುಂಪುಗಳಲ್ಲಿ ನಮಗೆ ಸಿಗುತ್ತವೆ.  ಮತ್ತು ಈ ಕಥೆ ಅಥವಾ ನಂಬಿಕೆಗಳು ಆ ಗುಂಪುಗಳ ಸಂಪ್ರದಾಯ, ಕಲೆ ಮತ್ತು ಭಾಷೆಗಳನ್ನು ರೂಪಿಸಿವೆ.

ಈ ಜನರು ತಮ್ಮದೆ ಆದಂತಹ ಜಾನಪದ ನೃತ್ಯಗಳನ್ನು , ಹಾಡುಗಳನ್ನು ಹೊಂದಿದ್ದಾರೆ. ಇವರು ಬಳಸುವ ಡಿಡ್ಜೆರಿಡೊ ಎನ್ನವ ಕೊಳವೆಯಂತಹ(ನಮ್ಮ ಸನಾದಿಯನ್ನು ಹೋಲುವ) ವಾದ್ಯಕ್ಕೆ ೧೦೦೦ ವರ್ಷಗಳ ಇತಿಹಾಸವಿದೆ ಎಂದು ಅಂದಾಜಿಸಲಾಗಿದೆ.
ಈಗ ಆಸ್ಟ್ರೇಲಿಯಾದ ಗುರುತಿನ ಚಿನ್ಹೆ ಎಂದೆನಿಸಿರುವ ಬೂಮರಾಂಗ್ ಎನ್ನವ ಆಯುಧ-ಉಪಕರಣವನ್ನು ಈ ಮೂಲನಿವಾಸಿಗಳು ತಲ-ತಲಾಂತರದಿಂದ ಉಪಯೋಗಿಸುತ್ತಿದ್ದಾರೆ. ಕಟ್ಟಿಗೆಯಿಂದ ಕೆತ್ತಿ ಲಂಬಕೋನಾಕೃತಿಯಲ್ಲಿ ಮಾಡಲ್ಪಡುತ್ತಿದ್ದ ಈ ಉಪಕರಣವನ್ನು ಇವರು ಬೇಟೆಯಾಡಲು ಮತ್ತು ಮನರಂಜನೆಗಾಗಿ ಆಟವಾಡಲು ಉಪಯೋಗಿಸುತ್ತಿದ್ದರು. ಈ ಬೂಮರಾಂಗ್‌ನ್ನು ಸ್ವಸ್ಥಾನಕ್ಕೆ ಮರಳುವಂತೆ ಎಸೆಯುವದು ಒಂದು ವಿಶಿಷ್ಟ ಕಲೆಯೆಂದೆ ಅನಿಸಿಕೊಂಡಿದೆ. ಬೂಮರಾಂಗ್‌ನ್ನು ಈಗಂತೂ ವಿವಿಧ ತರನಾಗಿ ತಯಾರಿಸಲಾಗುತ್ತಿದ್ದು ಬೂಮರಾಂಗ ಎಸೆತವನ್ನು ಮತ್ತು ಅಂತರಾಷ್ಟ್ರೀಯ ಆಟವನ್ನಾಗಿ ಆಡಲಾಗುತ್ತಿದೆ.
ಈ ನೆಲಕ್ಕೆ ಯುರೋಪಿಯನ್ನರು ಬರುವತನಕ ಒಂದುತರಹದ ನಿರ್ಲಿಪ್ತ ಜೀವನ ನಡೆಸುತ್ತಿದ್ದ ಈ ಮೂಲನಿವಾಸಿಗಳು ಅವರ ಆಗಮನದ ನಂತರ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಾಗರಿಕತೆಯನ್ನು ಅರಿಯದ ಈ ಸಮುದಾಯಕ್ಕೆ ಒತ್ತಾಯದ ಮೇರೆಗೆ ಆಧುನಿಕ ಜೀವನಕ್ರಮವನ್ನು ಹೇರಲಾಯಿತು. ಇದರಿಂದ ತಮ್ಮದೇ ನಾಡಿನಲ್ಲಿ ಪರಕೀಯತೆಯನ್ನು ಇವರು ಅನುಭವಿಸುವದರೊಂದಿಗೆ ಇವರೆಲ್ಲರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರಿತು. ಈ   ಮೂಲನಿವಾಸಿಗಳನ್ನು ಆಧುನಿಕತೆಗೆ ಒಳಪಡಿಸುವ ಭರದಲ್ಲಿ ಬ್ರಿಟೀಶರು ಇವರ ಮಕ್ಕಳನ್ನು ಇವರಿಂದ ಒತ್ತಾಯಪೂರ್ವಕವಾಗಿ ಬೇರ್ಪಡಿಸಿ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕೊಡಿಸಿದರು. ’ಸ್ಟೋ
ನ್ ಜನರೇಶನ್’ಎಂದು ಕರೆಯಲ್ಪಟ್ಟ ಈ ಮೂಲನಿವಾಸಿಗಳ ಸಂತತಿ ಅನುಭವಿಸಿದ ಯಾತನೆ ಯಾರೂ ಮರೆಯಲಾಗದಂತಹುದು.
,
ಆಸ್ಟ್ರೇಲಿಯಾಕ್ಕೆ ಯೂರೋಪಿಯನ್ನರ ಆಗಮನ:

೧೬೦೬ ರಲ್ಲಿ ಡಚ್ ಸಂಶೋಧಕನಾದ ವಿಲಿಯಮ್ ಜಾನ್ಸ್‌ಜೂನ್ ಆಸ್ಟ್ರೇಲಿಯಾದ ಈಗಿನ ಕ್ವೀನ್ಸ್‌ಲ್ಯಾಂಡ್ ರಾಜ್ಯಕ್ಕೆ ಭೇಟಿ ನೀಡಿದನು.  ಇವನೇ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಪ್ರಥಮ ಯೂರೋಪಿಯನ್.  ನಂತರದ ವರ್ಷದಲ್ಲಿ ಸ್ಪ್ಯಾನಿಷ ಸಂಶೋಧಕ ಲೂಯಿಸ್ ವೇಜ್ ಡೆ ಟೊರಸ್ ಎಂಬುವವನು ಆಸ್ಟ್ರೇಲಿಯ ಮತ್ತು  ಪಾಪುವಾ ನ್ಯೂಗಿನಿಯಾಗಳ ನಡುವೆ ತನ್ನ  ದೋಣಿ ಮೂಲಕ ಹಾದು ಹೋದನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ  ಯುರೋಪಿಯನ್ನರು ಈ ದೇಶವನ್ನು ’ನ್ಯೂಹಾಲಂಡ್’ಎಂದು ಕರೆಯುತ್ತಿದ್ದರು. ನಂತರದ ವರ್ಷಗಳಲ್ಲಿ ಬಹಳಷ್ಟು ಯೂರೋಪಿಯನ್ನರು ಭೇಟಿ ನೀಡಿದರೂ ಅವರಿಗೆ ಇಲ್ಲಿ ನೆಲೆಸಲು ಯಾವುದೇ ಆರ್ಥಿಕ ಅನುಕೂಲತೆಗಳು ಕಾಣಿಸಲಿಲ್ಲ.  ಏಕೆಂದರೆ ಇದು ಒಣಭೂಮಿ ನೆಲೆಸಲು ಯೋಗ್ಯವಾದ ಸ್ಥಳವಲ್ಲ ಎಂದು ಅವರು ಭಾವಿಸಿದರು.  ೧೬೪೨ ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಬಲ್ ಟಾಸ್ಮನ್ ಎಂಬುವವನು ಟಾಸ್ಮೇನಿಯಾಕ್ಕೆ ಬಂದನು. (ಅವನ ಹೆಸರಿನಿಂದಲೇ ಅದು ಟಾಸ್ಮೇನಿಯಾ ಎಂದು ಕರೆಯಲ್ಪಟ್ಟಿದೆ.) ೧೬೮೮ರಲ್ಲಿ, ವಿಲಿಯಮ್ ಡೆಂಪಿಯರ್ ಎನ್ನುವವನು ಆಸ್ಟ್ರೇಲಿಯಾಕ್ಕೆ ಪಾದರ್ಪಣೆ ಮಾಡಿದ ಪ್ರಥಮ ಇಂಗ್ಲೀಷಿಗನಾಗಿದ್ದಾನೆ. ನಂತರ ಹಲವಾರು ಜನರು ಇಲ್ಲಿಗೆ ನಾವೆಗಳ ಮೂಲಕ ಬಂದು ಹೋದರು. ಆದರೆ ಬ್ರಿಟೀಶರು ಈ ಹೊಸ ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ೧೭೭೦ ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್‌ನನ್ನು ಇಲ್ಲಿಗೆ ಕಳುಹಿಸಿದರು. ಜೇಮ್ಸ್ ಕುಕ್ ಈಗಿನ ನ್ಯೂಸೌಥ ವೇಲ್ಸ್‌ದ ಬಾಟನಿ-ಬೆ ಎಂಬಲ್ಲಿ ಬಂದಿಳಿದು ಅಲ್ಲಿಯ ಪ್ರದೇಶವನ್ನು ಅಭ್ಯಸಿಸಿ ಹಾಗೆ ಹೋಗ ಬೇಕಾದರೆ ಆಸ್ಟ್ರೆಲಿಯಾದ ಪೂರ್ವ ಕರಾವಳಿಯಗುಂಟ ಪ್ರಯಾಣಿಸಿದನು. ಆ ಸಮಯದಲ್ಲಿ ಅವನು ತಯಾರಿಸಿದ ಆಸ್ಟ್ರೇಲಿಯಾದ ನಕ್ಷೆ, ಇಂಗ್ಲೆಂಡ್‌ನಿಂದ ಬಂದು-ಹೋಗುವ ಸಮುದ್ರ ದಾರಿಯ ನಕ್ಷೆ ಬಹಳ ಸರಿಯಾಗಿದ್ದು, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಆ ಕಾಲದಲ್ಲಿ ಅವನು ಮಾಡಿದ ಈ ಸಾಧನೆ ಅವನ ಸಮುದ್ರ ಯಾನದ ಪರಿಣತಿಗೆ ಸಾಕ್ಷಿ ಆಗಿದೆ. ಅವನು ಪೂರ್ವಕರಾವಳಿಯಲ್ಲಿಯ ಅನೇಕ ಭೂಭಾಗಗಳನ್ನು ಅವುಗಳ ಅಕ್ಷಾಂಶ-ರೇಖಾಂಶಗಳೊಂದಿಗೆ ಗುರುತಿಸಿ ಅವುಗಳಿಗೆ ತನ್ನದೇ ಆದಂತಹ ಹೆಸರುಗಳನ್ನು ಕೊಟ್ಟಿದ್ದಾನೆ. ಆ ಸ್ಥಳಗಳನ್ನು ಇನ್ನೂ ಸಹಿತ ಅವೇ ಹೆಸರಿನಿಂದ ಕರೆಯಲಾಗುತ್ತದೆ. ಹೀಗೆ ಸಂಪೂರ್ಣ ಮಾಹಿತಿಯೊಂದಿಗೆ ಮರಳಿದ ಕ್ಯಾಪ್ಟನ್ ಕುಕ್‌ನ ಶಿಫ಼ಾರಸಿನಂತೆ ಬ್ರಿಟಿಶರು ಈ ಹೊಸ ಭೂಮಿಯಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಲು ಮುಂದಾದರು.